ನೇಸರ ಜೂ.24: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬಜತ್ತೂರು ಗ್ರಾಮದ ಬೆದ್ರೋಡಿಯಲ್ಲಿ ಕೆಎಸ್‌ಆರ್‌ಟಿಸಿ ಐರಾವತ ಬಸ್ಸು, ಟ್ಯಾಂಕರ್ ಹಾಗೂ ಲಾರಿಯೊಂದರ ನಡುವೆ ಜೂ.24ರಂದು ಬೆಳಿಗ್ಗೆ 6 ಗಂಟೆಗೆ ಡಿಕ್ಕಿ ಸಂಭವಿಸಿ ಸುಮಾರು 1 ತಾಸು ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡ್ಡಿಯಾದ ಘಟನೆ ನಡೆದಿದೆ.
ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಐರಾವತ ಬಸ್ಸು ಹಾಗೂ ಮಂಗಳೂರಿನಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಲಾರಿ ನಡುವೆ ಬೆದ್ರೋಡಿ ತಿರುವಿನಲ್ಲಿ ಡಿಕ್ಕಿ ಸಂಭವಿಸಿದೆ. ಬಸ್ಸಿಗೆ ಡಿಕ್ಕಿಯಾದ ಲಾರಿ ಬಳಿಕ ಎದುರಿನಿಂದ ಬರುತ್ತಿದ್ದ ಟ್ಯಾಂಕರ್‌ಗೂ ಡಿಕ್ಕಿಯಾಗಿದೆ. ಘಟನೆಯಿಂದಾಗಿ ಮೂರೂ ವಾಹನಗಳು ಜಖಂಗೊಂಡಿದ್ದು ಬಸ್ಸಿನಲ್ಲಿದ್ದ ಪ್ರಯಾಣಿಕರೊಬ್ಬರ ಕೈಗೆ ಗಾಜಿನ ಚೂರು ತಾಗಿ ಸಣ್ಣಪುಟ್ಟ ಗಾಯವಾಗಿರುವುದಾಗಿ ವರದಿಯಾಗಿದೆ. ಉಳಿದ ಪ್ರಯಾಣಿಕರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದರು.