ನೇಸರ ಜೂ.25: ದೇಶದಲ್ಲಿ ಇತರ ರಾಜ್ಯಗಳಿಗಿಂತ ಕರ್ನಾಟಕ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿರುವ ರಾಜ್ಯವಾಗಿದೆ. ರಾಜ್ಯದಲ್ಲಿ 6.60 ಲಕ್ಷ ಹೆಕ್ಟೇರ್ ಪ್ರದೇಶವನ್ನು ಡಿ ನೊಟಿಫಕೇಶನ್ ಮಾಡಿ ಕಂದಾಯ ಇಲಾಖೆಗೆ ನೀಡಿದ್ದು, ಅರಣ್ಯ ಇಲಾಖೆ 3.30 ಲಕ್ಷ ಹೆಕ್ಟೇರ್‌ನಲ್ಲಿ ಗಿಡ-ಮರಗಳನ್ನು ಬೆಳೆಸಲು ಯೋಜನೆ ರೂಪಿಸಲಾಗಿದೆ. ಬೆಳಗಾವಿ, ಬಾಗಲಕೋಟೆ ಮತ್ತು ಬಿಜಾಪುರದಲ್ಲಿ 57 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿದಿರು ಬೆಳೆಸಲು ಉದ್ದೇಶಿಸಲಾಗಿದೆ ಎಂದು ಎಂದು ಅರಣ್ಯ ಸಚಿವ ಉಮೇಶ್ ಕತ್ತಿ ಹೇಳಿದರು.
ಅವರು ಗುರುವಾರ ಬೆಳ್ತಂಗಡಿ ತಾಲೂಕಿನ ಬಡಕೋಡಿ ಗ್ರಾಮದ ಎರ್ಮೋಡಿ ಅರಣ್ಯ ಪ್ರದೇಶದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧರ್ಮಸ್ಥಳ, ಕರ್ನಾಟಕ ಅರಣ್ಯಇಲಾಖೆ, ಕುಂದಾಪುರ ಪ್ರಾದೇಶಿತ ಅರಣ್ಯ ವಿಭಾಗ ವೇಣೂರು ವಲಯ ಇದರ ಆಶ್ರಯದಲ್ಲಿ ರಾಜ್ಯಾದ್ಯಂತ ಸಾಮಾಜಿಕ ಅರಣ್ಯೀಕರಣ ಅಂಗವಾಗಿ ದಶಲಕ್ಷ ಹಣ್ಣಿನ ಗಿಡಗಳ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಎಲ್ಲರೂ ಗಿಡ-ಮರಗಳನ್ನು ಬೆಳೆಸಿ, ರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ಸುಸ್ಥಿತಿಯಲ್ಲಿ ಪ್ರಕೃತಿ-ಪರಿಸರವನ್ನು ಬಿಟ್ಟುಕೊಡುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ಬೆಳಗಾವಿ, ಬಾಗಲಕೋಟೆ ಮತ್ತು ಬಿಜಾಪುರದಲ್ಲಿ 57,000 ಹೆಕ್ಟೇರ್ ಪ್ರದೇಶದಲ್ಲಿ ಬಿದಿರು ಬೆಳೆಸಲು ಉದ್ದೇಶಿಸಲಾಗಿದೆ. ಕಳೆದ ವರ್ಷ ಕಾಡುಪ್ರಾಣಿಗಳ ಕಾಟದಿಂದ ರೈತರಿಗಾದ ನಷ್ಟಕ್ಕೆ ಸರ್ಕಾರದಿಂದ 20 ಕೋಟಿ ರೂ. ನೆರವು ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಕ್ಷೇತ್ರದಿಂದ ಹಲವಾರು ಸಾಮಾಜಿಕ ಯೋಜನೆಗಳನ್ನು ಹಮ್ಮಿಕೊಂಡಿದ್ದು ಎಲ್ಲರಿಗೂ ಮಾದರಿಯಾಗಿದೆ. ಮಾನವರು ಮತ್ತು ಪ್ರಾಣಿಗಳ ಮಧ್ಯೆ ಸಂಘರ್ಷ ತಡೆಯಲು ಧರ್ಮಾಧಿಕಾರಿ ಡಾ. ಹೆಗ್ಗಡೆಯವರು ಆರಂಭಿಸಿದ ಯೋಜನೆ ತುಂಬಾ ಪ್ರಯೋಜನಕಾರಿಯಾಗಿದೆ. ಈ ಕುರಿತು ಅರಣ್ಯ ಇಲಾಖೆ ಪೂರ್ಣ ಸಹಕಾರ ನೀಡುತ್ತದೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಬದುಕು ಮತ್ತು ಬದುಕಲು ಬಿಡು ಎಂಬುದು ಜೈನಧರ್ಮದ ಶ್ರೇಷ್ಠ ತತ್ವವಾಗಿದೆ. ನಾವೂ ಬದುಕಿ, ಇತರರೂ ಸುಖ-ಶಾಂತಿ, ನೆಮ್ಮದಿಯಿಂದ ಬದುಕಲು ಬಿಡಬೇಕು. ಪ್ರಾಣಿಗಳ ಮೊದಲ ಶತ್ರು ಮನುಷ್ಯನೆ ಆಗಿದ್ದಾರೆ. ಕಾಡಿನಲ್ಲಿ ಬೇಕಾದ ಆಹಾರ ಸಿಗದೆ ಅವುಗಳು ನಾಡಿಗೆ ಬರುತ್ತವೆ. ಆದುದರಿಂದ ಕಾಡಿನಲ್ಲಿ ಹಣ್ಣಿನ ಗಿಡ-ಮರಗಳನ್ನು ಬೆಳೆಸಿ ಅವುಗಳ ಫಲಗಳನ್ನು ಪ್ರಾಣಿಗಳಿಗೆ ಬಿಟ್ಟು ಬಿಡಲಾಗುವುದು. ಇದರಿಂದ ಕೃಷಿಗೆ ಪ್ರಾಣಿಗಳ ಉಪಟಳ ತಪ್ಪುತ್ತದೆ. ಪೊಲೀಸರು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಈಗ ಜನಸ್ನೇಹಿಯಾಗಿ ಪ್ರೀತಿ-ವಿಶ್ವಾಸದಿಂದ ಕೆಲಸ ಮಾಡುವುದರಿಂದ ಈ ಯೋಜನೆ ಯಶಸ್ವಿಯಾಗುತ್ತದೆ ಎಂದು ಹೆಗ್ಗಡೆಯವರು ಹೇಳಿದರು.
ಪ್ರಶಾಂತ ಪ್ರಕೃತಿ-ಪರಿಸರವನ್ನು ಪ್ರೀತಿಸಿ, ಗಿಡ-ಮರಗಳನ್ನು ಬೆಳೆಸಿ, ಫಲ-ಪುಷ್ಪಗಳನ್ನು ಪ್ರೀತಿಸಿ ಪರಿಸರಕ್ಕೆ ಹೊಂದಿಕೊಂಡು ನಾವು ಬದುಕಿದಾಗ ಪರಿಶುದ್ಧ ಆಮ್ಲಜನಕ ಎಲ್ಲರಿಗೂ ದೊರಕಿ ನಾವು ಆರೋಗ್ಯಪೂರ್ಣ ಜೀವನ ನಡೆಸಬಹುದು. ದಕ್ಷಿಣ ಕನ್ನಡದಲ್ಲಿ ಉತ್ತಮ ಮಳೆ, ಫಲವತ್ತಾದ ಮಣ್ಣು ಹಾಗೂ ಹೆಚ್ಚು ಅರಣ್ಯ ಪ್ರದೇಶ ಇರುವುದರಿಂದ ಇಲ್ಲಿನ ಪ್ರಕೃತಿ-ಪರಿಸರ ಎಲ್ಲರಿಗೂ ಆಕರ್ಷಣೀಯವಾಗಿದೆ ಎಂದರು.
ದೇವರಕಾಡು ಸಸಿ ವಿತರಣೆಯನ್ನು ಶಾಸಕ ಹರೀಶ್ ಪೂಂಜ ಹಾಗೂ ಶೌರ್ಯವನ ಸಸಿ ವಿತರಣೆಯನ್ನು ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ವಿತರಿಸಿ ಶುಭಾಶಂಸನೆ ಮಾಡಿದರು.
ಕೆರೆಯಂಗಳ ಸಸಿ ವಿತರಣೆಯನ್ನು ಸಚಿವ ಉಮೇಶ್ ಕತ್ತಿ, ಹಣ್ಣುಪಂಪಲು ಸಸಿ ವಿತರಣೆಯನ್ನು ಹೊಸಂಗಡಿ ಗ್ರಾ.ಪಂ. ಸದಸ್ಯ ಕರುಣಾಕರ ಪೂಜರಿ ಹಾಗೂ ಶಾಲಾವನ ಸಸಿ ವಿತರಣೆಯನ್ನು ಅರಣ್ಯ ಇಲಾಖೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ಎಸ್ ನೆಟಲ್‌ಕರ್ ನೆರವೇರಿಸಿದರು.
ಶೀಲಾ ಉಮೇಶ್ ಕತ್ತಿ, ಕುಂದಾಪುರ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಶೀಶ್ ರೆಡ್ಡಿ, ಮಂಗಳೂರು ವಿಭಾಗ ಡಿಎಫ್‌ಒ ದಿನೇಶ್ ಕುಮಾರ್, ಮೂಡುಬಿದ್ರೆ ಉಪವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್, ಪಡ್ಯಾರಬೆಟ್ಟು ಕ್ಷೇತ್ರದ ಧರ್ಮದರ್ಶಿ ಜೀವಂಧರ್ ಕುಮಾರ್, ಗ್ರಾ.ಯೋಜನೆ ಟ್ರಸ್ಟಿ ಸಂಪತ್ ಸಾಮ್ರಾಜ್ಯ, ಯೋಜನೆ ಸಿಇಒ ಅನಿಲ್ ಕುಮಾರ್, ಪ್ರಾದೇಶಿಕ ನಿರ್ದೇಶಕ ಶಾಂತರಾಮ ಪೈ, ವೇಣೂರು ವಲಯ ಅರಣ್ಯಾಧಿಕಾರಿ ಮಹೀಮ್ ಜನ್ನು ಉಪಸ್ಥಿತರಿದ್ದರು. ಪರಿಸರ ಸ್ನೇಹಿ ಸಾಧಕರಾದ ರಾಮಕೃಷ್ಣ ಭಟ್ ಪೆರಿಂಜೆ ಹಾಗೂ ಮಾಧವ ಉಳ್ಳಾಲ್ ಅವರಿಗೆ ಅರಣ್ಯ ಮಿತ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಂಡ್ಯ ಜಿಲ್ಲೆಯ ಮಳವಳ್ಳಿಯ ಫಲಾನುಭವಿ ರಮೇಶ್, ಕೆ. ಮಾತನಾಡಿ ಕೆರೆಗಳ ಹೂಳೆತ್ತಿ ಆದ ಪ್ರಯೋಜನವನ್ನು ವಿವರಿಸಿ ಕೃತಜ್ಞತೆ ವ್ಯಕ್ತಪಡಿಸಿದರು. ಧ.ಗ್ರಾ.ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್ ಪ್ರಸ್ತಾವಿಸಿ, ಸ್ವಾಗತಿಸಿದರು. ಪ್ರಾ.ನಿರ್ದೇಶಕ ವಿವೇಕ್ ವಿ.ಪಾಯಸ್ ಹಾಗೂ ಯೋಜನಾಧಿಕಾರಿ ಯಶವಂತ್ ಕಾರ್ಯಕ್ರಮ ನಿರ್ವಹಿಸಿದರು. ನಿರ್ದೇಶಕ ಸತೀಶ್ ಶೆಟ್ಟಿ ವಂದಿಸಿದರು.
935 ಎಕ್ರೆ ಶಾಲಾವನ, 508 ಎಕ್ರೆ ಪ್ರಗತಿವನ, 308 ಎಕ್ರೆ ದೇವರಕಾಡು, 242 ಎಕ್ರೆ ಔಷಧೀಯ ಗಿಡ, 3220 ಎಕ್ರೆ ಕೃಷಿ ಕಾಡು, 2057 ಎಕ್ರೆ ಶಾಲಾ ಕೈತೋಟ, 9635 ಎಕ್ರೆ ಮನೆ ಕೈತೋಟ, 446.80 ಲಕ್ಷ ಎಕ್ರೆ ಅಡಿಕೆ ಗಿಡನಾಟಿ, 27.55 ಲಕ್ಷ ಎಕ್ರೆ ತೆಂಗು ಗಿಡನಾಟಿ, 12 ಲಕ್ಷ ಗೇರು ಗಿಡನಾಟಿ, 29.30 ಲಕ್ಷ ಪುಷ್ಪ ಗಿಡನಾಟಿ ಮಾಡಲಾಗಿದೆ.
** ಸಾಲು ಮರದ ಕಾರ್ಯಕ್ರಮದ ಮೂಲಕ 8.45 ಲಕ್ಷ ಗಿಡ ನಾಟಿ ಮಾಡಲಾಗಿದೆ. 474 ಕೆರೆಗಳಲ್ಲಿ 51760 ಗಿಡನಾಟಿ ಹಾಗೂ ಶೌರ್ಯವನದಲ್ಲಿ 64000 ಗಿಡಗಳನ್ನು ನಾಟಿ ಮಾಡಲಾಗಿದೆ. 209 ತಾಲೂಕು ಯೋಜನಾ ಕಚೇರಿ ಹಾಗೂ 39 ಜಿಲ್ಲಾ ಯೋಜನಾ ಕಚೇರಿ ಹೊಂದಿದ್ದು, ಪ್ರತಿ ಯೋಜನಾ ಕಚೇರಿಗೆ ತಲಾ 5000 ಸಾವಿರದಂತೆ ಗಿಡಗಳನ್ನು ನಾಟಿ ಮಾಡಲಾಗುತ್ತದೆ.
** ಗಿಡನಾಟಿ ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತದಿಂದ 150 ಫಲಾನುಭವಿಗಳು ಆಗಮಿಸಿದ್ದರು. ಅರಣ್ಯ ಇಲಾಖೆ ಹಾಗೂ ಯೋಜನೆಯ ಒಕ್ಕೂಟದ ಪದಾಧಿಕಾರಿಗಳು, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರ ಮೂಲಕ ಗಿಡ ನಾಟಿ ಮಾಡಲಾಗುತ್ತದೆ.