ನೆಲ್ಯಾಡಿ: ಬ್ಯಾಂಕ್ ಖಾತೆ ದುರ್ಬಳಕೆ ಮಾಡಿ ಲಕ್ಷಾಂತರ ರೂಪಾಯಿ ವಂಚನೆ

ಶೇರ್ ಮಾಡಿ

ನೇಸರ ಜೂ.25: ಬಿಳಿಯೂರುಕಟ್ಟೆ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರೌಢಶಾಲಾ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕಡಬ ತಾಲೂಕಿನ ನೆಲ್ಯಾಡಿ ಗ್ರಾಮ ಮಾದೇರಿ ನಿವಾಸಿಯೊಬ್ಬರ ಬ್ಯಾಂಕ್ ಅಕೌಂಟ್ ಖಾತೆಯಿಂದ 7,47,080 ರೂ. ಗಳನ್ನು ಯಾರೋ ಅಪರಿಚಿತರು ಡ್ರಾ ಮಾಡಿ ವಂಚನೆ ಮಾಡಿರುವ ಘಟನೆ ನಡೆದಿದೆ. ಈ ಬಗ್ಗೆ ಜಿಲ್ಲಾ ಸೈಬರ್ ಕ್ರೈಂ ವಿಭಾಗದಲ್ಲಿ ಪ್ರಕರಣ ದಾಖಲಾಗಿದೆ.
ಶಿಕ್ಷಕಿಯ ಖಾತೆ ದುರ್ಬಳಕೆ ಮಾಡಿಕೊಂಡು ಅದಕ್ಕೆ 8 ಲಕ್ಷ ರೂ. ಜಮೆ ಮಾಡಿಸಿ, ಅದರಿಂದ 7.47 ಲಕ್ಷ ಡ್ರಾ ಮಾಡಿರುವ ವಿಲಕ್ಷಣ ಪ್ರಕರಣ ಇದಾಗಿದೆ.
ಇದರ ಹಿಂದಿನ ಕೈಗಳು, ಅವರ ಉದ್ದೇಶ ನಿಗೂಢವಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ವಿವರ:

ಶಿಕ್ಷಕಿ ಸಜಿಲಾ ಅವರ ಮಗನ ದೂರವಾಣಿ ಸಂಖ್ಯೆಗೆ ಎಟಿಎಂ ಕಾರ್ಡ್ ಬ್ಲಾಕ್ ಆಗಿರುವ ಬಗ್ಗೆ ಮೆಸೇಜ್ ಬಂದಿದೆ. ನಂತರ ಒಂದು ದೂರವಾಣಿ ನಂಬರಿನಿಂದ ಕೆವೈಸಿ ಅಪ್ಡೇಟ್ ಮಾಡಲು ಕಸ್ಟಮರ್ ಕೇರ್ ನಂಬರೊಂದಕ್ಕೆ ಕರೆ ಮಾಡುವಂತೆ ಮೆಸೇಜ್ ಬಂದಿರುತ್ತದೆ. ಅದಕ್ಕೆ ಸಜಿಲಾರವರ ಮಗ ಕರೆ ಮಾಡಿ ಮಾತನಾಡಿದ್ದಾನೆ. ಖಾತೆಯ ಪಿನ್ ಜನರೇಟ್ ಮಾಡಲು ಮನೆಯಲ್ಲಿರುವ ಇನ್ನೊಬ್ಬರ SBI ಖಾತೆ ನಂಬ್ರ ಹಾಗೂ ಮೊಬೈಲ್ ನಂಬ್ರ ನೀಡಲು ತಿಳಿಸಿರುದ್ದಾರೆ. ಅದಕ್ಕವನು ತನ್ನ ತಾಯಿ ಸಜಿಲಾರವರ SBI ಖಾತೆ ಸಂಖ್ಯೆ, ಹಾಗೂ ಮೊಬೈಲ್ ನಂಬರ್ ನೀಡಿರುತ್ತಾನೆ. ನಂತರ ಅದೇ ದಿನ ಅಪರಿಚಿತ ವ್ಯಕ್ತಿಯ ಮೊಬೈಲ್ ನಂಬರ್‌ನಿಂದ ಆತನಿಗೆ ಕಾಲ್ ಬಂದಿದ್ದು, ಸಜಿಲಾರವರ ನಂಬರ್‌ಗೆ ಬಂದಿರುವ ಒಟಿಪಿ ಕೇಳಿದ್ದಾನೆ. ತಾಯಿಯ ಮೊಬೈಲ್ ಗೆ ಬಂದ ಒಟಿಪಿಯನ್ನು ಆತ ನೀಡಿರುತ್ತಾನೆ.
ಬಳಿಕ ಆ ಅಪರಿಚಿತರು ಹೇಳಿದ ಪ್ರಕಾರ ಸಜಿಲಾರ ಪುತ್ರ ಎಟಿಎಂ ಕೇಂದ್ರಕ್ಕೆ ಹೋಗಿ ಅವರು ಹೇಳಿದ ಪ್ರಕಾರ ನಿರ್ವಹಿಸಿದ್ದಾನೆ.ಇದೆಲ್ಲ ನಡೆದ ಬಳಿಕ ಬ್ಯಾಂಕಿನಿಂದ ಸಜಿಲಾರಿಗೆ ಕರೆ ಬಂದಿದ್ದು, ನೀವು ಮೊಬೈಲ್ ನಂಬರ್ ಬದಲಾಯಿಸಿದ್ದೀರಾ ಎಂದು ವಿಚಾರಿಸಿದ್ದಾರೆ. ಅವರು ಇಲ್ಲವೆಂದು ಉತ್ತರಿಸಿದ್ದು, ಗಾಬರಿಗೊಂಡು ಬ್ಯಾಂಕಿಗೆ ತೆರಳಿ ವಿಚಾರಿಸಿದಾಗ ಅವರ ಖಾತೆಯಿಂದ ಹಂತ ಹಂತವಾಗಿ ಒಟ್ಟು ‌7,47,080 ರೂ. ಡ್ರಾ ಮಾಡಿರುವುದು ಬೆಳಕಿಗೆ ಬಂತು. ಆತಂಕದಿಂದ ಸಜಿಲಾ ಅವರು ಇದು ಹೇಗಾಯಿತೆಂದು ವಿಚಾರಿಸಿದಾಗ ಸಜಿಲಾರವರ ಖಾತೆಯಿಂದ 8,00,000 ರೂ. ಲೋನ್ ತೆಗೆಯಲಾಗಿದೆ. ಮತ್ತು ಅದರಿಂದ ಡ್ರಾ ಮಾಡಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ.
ಇದು ಹೇಗೆ ಸಾಧ್ಯವಾಯಿತು ಎಂದು ಅತಂಕಗೊಂಡ ಶಿಕ್ಷಕಿ ವಂಚಿಸಿ ಮೋಸ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರಕರಣ ದಾಖಲಿಸಿದ್ದಾರೆ.

ವೀಕ್ಷಿಸಿ SUBSCRIBERS ಮಾಡಿ🙏🏻

Leave a Reply

error: Content is protected !!