ಇಚ್ಲಂಪಾಡಿ: ವಿಷ ಪದಾರ್ಥ ಸೇವಿಸಿದ್ದ ಮಹಿಳೆ ಸಾವು !! ಪತಿ ಪರಾರಿ ಯತ್ನ-ಪೊಲೀಸ್ ವಶ.

ಶೇರ್ ಮಾಡಿ

ನೇಸರ ನ13: 4 ದಿನದ ಹಿಂದೆ ವಿಷ ಪದಾರ್ಥ ಸೇವಿಸಿ ತೀವ್ರ ಅಸ್ವಸ್ಥಗೊಂಡ ಇಚ್ಲಂಪಾಡಿಯ ಮಹಿಳೆಯೋರ್ವರು ಚಿಕಿತ್ಸೆಗೆ ಸ್ಪಂದಿಸದೆ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ನ.11ರಂದು ರಾತ್ರಿ ನಿಧನರಾಗಿದ್ದಾರೆ.
ಇಚ್ಲಂಪಾಡಿ ಗ್ರಾಮದ ನಿಡ್ಯಡ್ಕ ನಿವಾಸಿ ವೆಂಕಟೇಶ್ ಎಂಬವರ ಪತ್ನಿ ಸೌಮ್ಯ(36ವ.)ಮೃತಪಟ್ಟವರು. ಗೋಳಿಯಡ್ಕದ ಬೀಜದ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಸೌಮ್ಯರವರು ನ.9 ರಂದು ಸಂಜೆ ಮನೆಯಲ್ಲಿ ವಿಷ ಪದಾರ್ಥ ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದರು. ಸೌಮ್ಯ ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡ ಬೆನ್ನಲ್ಲೇ ಆಕೆಯ ಪತಿ ವೆಂಕಟೇಶ್ ಸಹ ಇಲಿ ಪಾಷಾಣ ಸೇವಿಸಿದ್ದರು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಇಬ್ಬರನ್ನೂ ಕಡಬ ಸಮುದಾಯ ಆಸ್ಪತ್ರೆಗೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ಪೈಕಿ ಸೌಮ್ಯ ತೀವ್ರ ಅಸ್ವಸ್ಥಗೊಂಡಿದ್ದ ಹಿನ್ನೆಲೆಯಲ್ಲಿ ಆಕೆಯನ್ನು ನ.10ರಂದು ಬೆಳಿಗ್ಗೆ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ನ.11ರಂದು ಅವರು ರಾತ್ರಿ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.
ಆಸ್ಪತ್ರೆಯಿಂದ ಪರಾರಿಯಾಗಿದ್ದ ಆಕೆಯ ಪತಿ ವೆಂಕಟೇಶ್ ಪೊಲೀಸ್ ವಶ: ಸೌಮ್ಯ ಮೃತಪಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆ ಇತ್ತ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಆಕೆಯ ಪತಿ ವೆಂಕಟೇಶ್ ಅಲ್ಲಿಂದ ನ.12ರಂದು ಪರಾರಿ ಆಗಿದ್ದರು ಎಂದು ಹೇಳಲಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಅಲ್ಲಿನ ವೈದ್ಯರು ಪುತ್ತೂರು ನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಅಲ್ಲಿಂದ ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಇತ್ತ ವೆಂಕಟೇಶ್ ತಮಿಳುನಾಡಿಗೆ ಪರಾರಿಯಾಗುವ ನಿಟ್ಟಿನಲ್ಲಿ ಮಂಗಳೂರು ರೈಲ್ವೆ ನಿಲ್ದಾಣಕ್ಕೆ ತೆರಳಿರುವ ಕುರಿತು ಮಾಹಿತಿ ಪಡೆದುಕೊಂಡ ಉಪ್ಪಿನಂಗಡಿ ಪೊಲೀಸರು ವೆಂಕಟೇಶ್‌ರನ್ನು ಅಲ್ಲಿಂದ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ವೆಂಕಟೇಶ್ ಮೂಲತ: ತಮಿಳುನಾಡು ನಿವಾಸಿ. ಈತ ತಮಿಳುನಾಡಿನ ಬಟ್ಟೆ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅಲ್ಲಿಯೇ ಕೆಲಸ ಮಾಡುತ್ತಿದ್ದ ಇಚ್ಲಂಪಾಡಿಯ ಸೌಮ್ಯರನ್ನು ಪ್ರೀತಿಸಿ ಬಳಿಕ ಮದುವೆಯಾಗಿದ್ದರು. 14 ವರ್ಷದ ಹಿಂದೆ ವೆಂಕಟೇಶ್ ಹಾಗೂ ಸೌಮ್ಯ ಮದುವೆಯಾಗಿದ್ದು ಮದುವೆ ಬಳಿಕ ಇಬ್ಬರೂ ಇಚ್ಲಂಪಾಡಿಯ ನಿಡ್ಯಡ್ಕದಲ್ಲಿರುವ ಸೌಮ್ಯರವರ ಮನೆಯಲ್ಲಿ ವಾಸವಾಗಿದ್ದರು. ಈ ದಂಪತಿಗೆ 1 ಗಂಡು ಹಾಗೂ 1 ಹೆಣ್ಣು ಮಗುವಿದೆ. ಸೌಮ್ಯ ಗೋಳಿಯಡ್ಕದ ಬೀಜದ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದು ವೆಂಕಟೇಶ್ ಕೂಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

Leave a Reply

error: Content is protected !!