ನೇಸರ ಜೂ.26: ಅನುಭವ ನಿಷ್ಠ ಬರಹಗಳು ಸೃಜನ ಶೀಲ ಸ್ವರೂಪವನ್ನು ಪಡೆಯುತ್ತವೆ. ಕಾವ್ಯ ಎಂದರೆ ಅದು ಭಾವನೆಗಳ ಧ್ವನಿ ಹಾಗೂ ನಾನಾ ಸೂಚ್ಯ ಅರ್ಥಗಳನ್ನು ಹೊಂದಿರುತ್ತದೆ. ಗದ್ಯ ಒಂದೇ ಅರ್ಥವನ್ನು ಹೊಂದಿದ್ದು, ಅದು ವಾಚ್ಯವಾಗಿರುತ್ತದೆ ಎಂದು ಹಿರಿಯ ಕವಿ, ಸಾಹಿತಿ ಡಾ.ವಸಂತಕುಮಾರ್ ಪೆರ್ಲ ಹೇಳಿದರು.
ಅವರು ಉಜಿರೆಯ ಶ್ರೀ ಧ.ಮಂ.ಕಾಲೇಜಿನ ಸಮ್ಯಗ್ದರ್ಶನ ಸಭಾಭವನದಲ್ಲಿ ಕವಯತ್ರಿ, ಪುತ್ತೂರಿನ ಉಪ ತಹಸೀಲ್ದಾರ್ ಸುಲೋಚನಾ ಪಿ.ಕೆ. ಅವರ ‘ಕೊಡುವ ಮೊದಲು’ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಉಜಿರೆ ಶ್ರೀ ಧ.ಮಂ. ಮಹಾವಿದ್ಯಾಲಯದ ಕನ್ನಡ ಸಂಘದ ವತಿಯಿಂದ ಕಾರ್ಯಕ್ರಮ ನಡೆಯಿತು.
ಶಿಕ್ಷಣವು ವ್ಯಕ್ತಿಯ ಸರ್ವಾಂಗೀಣ ಬೆಳವಣಿಗೆ, ವ್ಯಕ್ತಿತ್ವ ವಿಕಾಸ, ಜ್ಞಾನಕೋಶ ಭಾವಕೋಶಗಳನ್ನು ವಿಸ್ತರಿಸುತ್ತದೆ. ಸಮಾಜಕ್ಕೆ ಹೆಚ್ಚಿನ ಕೊಡುಗೆ ನೀಡಬಲ್ಲವರನ್ನಾಗಿ ರೂಪಿಸುತ್ತದೆ. ಕಲಿಕೆಯ ಜತೆ ಸಾಧನೆ ಮಾಡುವ ಗುರಿ ಹೊಂದಿದವರು ಸಮಾಜಕ್ಕೆ ಕೊಡುಗೆ ನೀಡಲು ಸಾಧ್ಯ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕ ರಾಜೇಶ್ ಜಿ. ಮಾತನಾಡಿ, ಬರಹಗಾರರಿಗೆ ಬೆಂಬಲ ಪ್ರೋತ್ಸಾಹ ಬೇಕು, ಇದು ಇನ್ನಷ್ಟು ಉತ್ತಮ ಕೃತಿಗಳು ಮೂಡಿಬರಲು ಪ್ರೇರಣೆಯಾಗುತ್ತದೆ ಎಂದರು.
ಸುಲೋಚನಾ ಪಿಕೆ ಮಾತನಾಡಿ ಓದುವುದು ಮಾತ್ರ ಜ್ಞಾನವಲ್ಲ, ಅನುಭವಗಳನ್ನು ಅರಗಿಸಿಕೊಳ್ಳುವುದು ನಿಜವಾದ ಜ್ಞಾನವನ್ನು ನೀಡುತ್ತದೆ ಎಂದರು. ಕಾಲೇಜಿನ ಪ್ರಿನ್ಸಿಪಾಲ್ ಡಾ.ಉದಯಚಂದ್ರ ಪಿ.ಎನ್. ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಸಾಪ ಜಿಲ್ಲಾ ಕಾರ್ಯಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ.ಬಿ.ಪಿ. ಸಂಪತ್ ಕುಮಾರ್ ಸ್ವಾಗತಿಸಿದರು. ಮಹೇಶ್ ಆರ್ ಕಾರ್ಯಕ್ರಮ ನಿರೂಪಿಸಿದರು. ದಶಮಿ ವಂದಿಸಿದರು.