ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಪೋಷಕರ ಸಭೆ

ಶೇರ್ ಮಾಡಿ

“ವಿದ್ಯಾರ್ಥಿಗಳು ಗಾಳಿಪಟವಿದ್ದಂತೆ. ಗಾಳಿಪಟವು ಆಕಾಶದಲ್ಲಿ ಹಾರುವಂತೆ ಸಮಾಜದಲ್ಲಿ ಅವರು ಮೇಲೆ ಮೇಲೆ ಏರಬೇಕು. ಸಮಾಜಕ್ಕೆ ಉಪಕಾರಿಯಾಗಬೇಕು”  -ಶಿಕ್ಷಣ ತಜ್ಞರಾದ ಬಿ ವಿ ಸೂರ್ಯನಾರಾಯಣ

ನೇಸರ ಜೂ.26: ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪೋಷಕರ ಸಭೆಯು ನಡೆಯಿತು.
ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ನಿವೃತ್ತ ಪ್ರಾಂಶುಪಾಲ ಮತ್ತು ಶಿಕ್ಷಣ ತಜ್ಞರಾದ ಬಿ ವಿ ಸೂರ್ಯನಾರಾಯಣ ಅವರು ಪೋಷಕರನ್ನು ಉದ್ದೇಶಿಸಿ ಮಾತನಾಡುತ್ತಾ “ವಿದ್ಯಾರ್ಥಿಗಳು ಗಾಳಿಪಟವಿದ್ದಂತೆ. ಗಾಳಿಪಟವು ಆಕಾಶದಲ್ಲಿ ಹಾರುವಂತೆ ಸಮಾಜದಲ್ಲಿ ಅವರು ಮೇಲೆ ಮೇಲೆ ಏರಬೇಕು. ಸಮಾಜಕ್ಕೆ ಉಪಕಾರಿಯಾಗಬೇಕು. ಗಾಳಿಪಟಕ್ಕೆ ದಾರವು ಸಹಕಾರಿಯಾಗುವಂತೆ ಮಕ್ಕಳೊಂದಿಗೆ ಉತ್ತಮ ಸಂಬಂಧವೆಂಬ ದಾರದಿಂದ ಅವರು ಸಮಾಜಕ್ಕೆ ಮತ್ತು ಮನೆಗೆ ಪೂರಕವಾಗಿರುವಂತೆ ನೋಡಿಕೊಳ್ಳಬೇಕು. ನಾವು ಹೇಗೆ ಇದ್ದೇವೆಯೋ ಹಾಗೆಯೇ ಮಕ್ಕಳು ಇರುತ್ತಾರೆ. ನಾವು ಸ್ವಲ್ಪ ಟಿವಿ, ಮೊಬೈಲ್ ಗಳನ್ನು ತ್ಯಾಗ ಮಾಡಬೇಕು ಅದೂ ನಮ್ಮ ಮಕ್ಕಳ ಭವಿಷ್ಯಕ್ಕಾಗಿ. ಗಾಳಿಪಟಕ್ಕೆ ಆಕಾಶದಲ್ಲಿ ಹಾರಲು ಗಾಳಿ ಬೇಕು. ಅಂತೆಯೇ ಮಕ್ಕಳಿಗೆ ಪ್ರೊತ್ಸಾಹದ ಗಾಳಿ ಬೀಸಿದರೆ, ಅವರು ಸಮಾಜದ ಉನ್ನತ ಪದವಿಗಳನ್ನು ಏರಲು ಸಾಧ್ಯ” ಎಂದು ಕಿವಿಮಾತನ್ನು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕೆ ಎಸ್., ಇವರು ಸಂಸ್ಥೆಯ ಸಾಧನೆಗಳನ್ನು ವಿವರಿಸಿ ಹೇಳಿದರು. ಕಾಲೇಜಿನ ಪ್ರಾಂಶುಪಾಲರು ಸ್ವಾಗತಿಸಿ, ಕಾಲೇಜಿನ ನಿಯಮಗಳನ್ನು ತಿಳಿಸಿದರು. ಹಿರಿಯ ಉಪನ್ಯಾಸಕರಾದ ಗುಡ್ಡಪ್ಪ ಬಲ್ಯರವರು ಕಾಲೇಜಿನ ಉಪನ್ಯಾಸಕರ ಪರಿಚಯ ಮಾಡಿದರು. ಕಾಲೇಜಿನ ಹಿರಿಯ ಉಪನ್ಯಾಸಕರಾದ ಹರಿನಾರಾಯಣ ಆಚಾರ್ಯರು ಧನ್ಯವಾದ ಸಮರ್ಪಿಸಿದರು. ಕಾಲೇಜಿನ ಕನ್ನಡ ಉಪನ್ಯಾಸಕಿ ಶ್ರೀಮತಿ ಮಲ್ಲಿಕಾ ರವರು ಕಾರ್ಯಕ್ರಮ ನಿರ್ವಹಿಸಿದರು.

ವೀಕ್ಷಿಸಿ SUBSCRIBERS ಮಾಡಿ🙏🏻

Leave a Reply

error: Content is protected !!