





ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುತ್ಯಾಡಿ ಸಮೀಪ ಕಳೆದ ಸುಮಾರು ಮೂರು ವರ್ಷಗಳ ಹಿಂದೆ ಪಂಚಾಯಿತಿ ವತಿಯಿಂದ ಕಸ ವಿಲೇವಾರಿ ಮಾಡಲಾಗುತ್ತಿದ್ದ ಜಾಗದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಮಾಹಿತಿಯ ಪ್ರಕಾರ, ಯಾರೋ ಕಿಡಿಗೇಡಿಗಳು ಕಸಕ್ಕೆ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದ್ದು, ಅಲ್ಲಿ ಸಂಗ್ರಹವಾಗಿದ್ದ ಕಸ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಬೆಂಕಿಯ ತೀವ್ರತೆ ಹೆಚ್ಚಾದ ಪರಿಣಾಮ ಪಕ್ಕದಲ್ಲಿರುವ ಅರಣ್ಯ ಪ್ರದೇಶಕ್ಕೂ ಜ್ವಾಲೆಗಳು ಹಬ್ಬಿದ್ದು, ಇನ್ನಷ್ಟು ಅರಣ್ಯ ಪ್ರದೇಶಕ್ಕೂ ಬೆಂಕಿ ವ್ಯಾಪಿಸುವ ಸಾಧ್ಯತೆ ಉಂಟಾಯಿತು. ಈ ವೇಳೆ ಮನೆಗೆ ತೆರಳುತ್ತಿದ್ದ ಸ್ಥಳೀಯ ನಿವಾಸಿ ಶ್ಯಾಮರಾಜ್ ಪಟ್ರಮೆ ಅವರು ಘಟನೆ ಗಮನಿಸಿ ತಕ್ಷಣ ಅರಣ್ಯ ಇಲಾಖೆಯ ವೀಕ್ಷಕ ದಾಮೋದರ್ ಅವರಿಗೆ ಮಾಹಿತಿ ನೀಡಿದರು. ಜೊತೆಗೆ ಗ್ರಾಮ ಪಂಚಾಯಿತಿಗೂ ವಿಷಯ ತಿಳಿಸಲಾಯಿತು. ಬಳಿಕ ಅಗ್ನಿಶಾಮಕ ದಳಕ್ಕೂ ಕರೆ ಮಾಡಿ ಪರಿಸ್ಥಿತಿಯನ್ನು ವಿವರಿಸಲಾಯಿತು.
ಸ್ಥಳೀಯರಿಗೆ ಸಹ ತಕ್ಷಣ ಮಾಹಿತಿ ನೀಡಿ, ಬೆಂಕಿ ನಂದಿಸುವ ಕಾರ್ಯದಲ್ಲಿ ಸಹಕರಿಸುವಂತೆ ಮನವಿ ಮಾಡಲಾಯಿತು. ಸ್ಥಳೀಯರು ಹಾಗೂ ಸಂಬಂಧಿತ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾದರು.
ಆದರೆ, ಘಟನೆ ಬಗ್ಗೆ ಮಾಹಿತಿ ನೀಡಿದ್ದರೂ ಗ್ರಾಮ ಪಂಚಾಯಿತಿಯಿಂದ ಯಾವುದೇ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡದೇ ಇರುವುದರಿಂದ ಸ್ಥಳೀಯರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಅಗ್ನಿಶಾಮಕ ದಳವೂ ಕರೆ ಮಾಡಿದ ನಂತರ ಸುಮಾರು 2 ಗಂಟೆಗಳಿಗೂ ಅಧಿಕ ಸಮಯದ ಬಳಿಕ ಸ್ಥಳಕ್ಕೆ ಆಗಮಿಸಿದ್ದು, ತುರ್ತು ಪರಿಸ್ಥಿತಿಯಲ್ಲಿ ವಿಳಂಬ ಕಂಡುಬಂದಿದೆ ಎಂಬ ಆರೋಪಗಳು ಕೇಳಿಬಂದಿವೆ.
ಮೂರು ವರ್ಷಗಳ ಹಿಂದೆ ಕಸ ವಿಲೇವಾರಿ ಘಟಕ ಇರದ ಸಂದರ್ಭದಲ್ಲೇ ಗ್ರಾಮ ಪಂಚಾಯಿತಿ ಕಸ ತ್ಯಾಜ್ಯವನ್ನು ಈ ಪ್ರದೇಶದಲ್ಲಿ ಸಂಗ್ರಹಿಸಲಾಗುತ್ತಿತ್ತು. ಬಳಿಕ ಬದಲಿ ವ್ಯವಸ್ಥೆ ಆದ ನಂತರವೂ ಈ ಪ್ರದೇಶದಲ್ಲಿದ್ದ ಕಸವನ್ನು ಸಂಪೂರ್ಣವಾಗಿ ವಿಲೇವಾರಿ ಮಾಡಿ ಗುಂಡಿ ಮುಚ್ಚುವ ಕ್ರಮ ಕೈಗೊಳ್ಳದೇ ನಿರ್ಲಕ್ಷ ವಹಿಸಿರುವುದೇ ಇಂತಹ ಅನಾಹುತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಅವಘಡಗಳನ್ನು ತಪ್ಪಿಸಲು ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.





