





ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಮರುವಂತಿಲ ಭಾಗದಲ್ಲಿ ಕಾಡಾನೆ ಹಾವಳಿ ಮತ್ತೆ ತೀವ್ರಗೊಂಡಿದ್ದು, ಕೃಷಿಕರ ಜೀವನಕ್ಕೆ ಆತಂಕ ಉಂಟುಮಾಡುತ್ತಿದೆ. ಬುಧವಾರ ರಾತ್ರಿ ನಡೆದ ದಾಳಿಯಲ್ಲಿ ಮನೆಯೊಂದರ ಗೇಟ್‌ನ್ನು ಮುರಿದು, ಕೃಷಿ ಭೂಮಿಗೂ ಹಾನಿ ಮಾಡಿದೆ.
ಮರುವಂತಿಲದ ಕೃಷಿಕ ವಿಜಯ ಎನ್. ಶಬರಾಯ ಅವರ ವಿಜಯ-ವಿಹಾರ ನಿವಾಸದ ಬಳಿ ರಾತ್ರಿ ಸುಮಾರು 1 ಗಂಟೆ ವೇಳೆಗೆ ಕಾಡಾನೆ ಕಾಣಿಸಿಕೊಂಡು, ಮನೆಯ ಗೇಟ್‌ನ್ನು ಮುರಿದು ಧ್ವಂಸಗೊಳಿಸಿದೆ. ಬಳಿಕ ಅವರ ಗೇರು ತೋಟಕ್ಕೂ ಹಾನಿ ಮಾಡಿದೆ. ಇದಲ್ಲದೆ, ಆನಂದ ಗೌಡ ಅವರ 7 ತೆಂಗಿನ ಮರಗಳು, ಕುಶಾಲಪ್ಪ ಗೌಡ ಅವರ 4 ತೆಂಗಿನ ಮರಗಳು ಹಾಗೂ ಸುಂದರ ನಾಯ್ಕ ಅವರ 2 ತೆಂಗಿನ ಮರಗಳನ್ನು ಕಾಡಾನೆ ನೆಲಸಮಗೊಳಿಸಿದೆ. ವಿಜಯ ವಿಹಾರ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಕಾಡಾನೆ ಸಂಚಲನದ ದೃಶ್ಯಗಳು ಸೆರೆಯಾಗಿವೆ.
ಈ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದಲೇ ಕಾಡಾನೆ ಸಂಚಾರ ಹೆಚ್ಚಾಗಿದ್ದು, ಜನರಲ್ಲಿ ಭೀತಿ ವಾತಾವರಣ ನಿರ್ಮಾಣವಾಗಿದೆ. ಇದಕ್ಕೂ ಮುನ್ನ ಮಾ.23ರಂದು ಸಂಜೆ ಪಟ್ಟೂರಿನಿಂದ ಸೌತಡ್ಕ ಕಡೆಗೆ ಸಾಗುವ ವಸರಿಕಟ್ಟೆ ಪ್ರದೇಶದಲ್ಲಿ ಕಾಲೇಜಿನಿಂದ ಬಸ್‌ನಲ್ಲಿ ಇಳಿದು ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಹಾಗೂ ಬೈಕ್ ಸವಾರನಿಗೆ ಕಾಡಾನೆ ಎದುರಾದ ಘಟನೆ ಕೂಡ ನಡೆದಿದೆ.
ಘಟನೆ ಕುರಿತು ಮಾಹಿತಿ ಪಡೆದ ಉಪ್ಪಿನಂಗಡಿ ವಲಯದ ಉಪವಲಯ ಅರಣ್ಯಾಧಿಕಾರಿ ಶಿವಾನಂದ ಆಚಾರ್ಯ, ಗಸ್ತು ವನಪಾಲಕರಾದ ದಿವಾಕರ, ವಿನಯಚಂದ್ರ ಹಾಗೂ ಸಿಬ್ಬಂದಿ ದಾಮೋದರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮಸ್ಥರು ಮುಂಜಾಗ್ರತಾ ಕ್ರಮವಾಗಿ ಜಾಗ್ರತೆ ವಹಿಸಬೇಕೆಂದು ಸೂಚನೆ ನೀಡಲಾಗಿದೆ. ವಿಶೇಷವಾಗಿ ಆ ಮಾರ್ಗದಲ್ಲಿ ಸಂಚರಿಸುವವರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಅರಣ್ಯ ಇಲಾಖೆ ಮನವಿ ಮಾಡಿದೆ.
ಗ್ರಾಮಸ್ಥರ ಪ್ರಕಾರ ಕಳೆದ 4–5 ದಿನಗಳಿಂದ ಇದೇ ಪ್ರದೇಶದಲ್ಲಿ ಕಾಡಾನೆ ನಿರಂತರವಾಗಿ ಸಂಚರಿಸುತ್ತಿದ್ದು, ಹಾವಳಿಯನ್ನು ತಡೆಗಟ್ಟಲು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಗಸ್ತು ಹೆಚ್ಚಿಸಿ ಕಾಡಾನೆ ಚಲನವಲನವನ್ನು ನಿಗಾದಲ್ಲಿ ಇಟ್ಟಿದ್ದಾರೆ.





