ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆಯ ಸ್ವಾಗತಕ್ಕೆ :ಕಡಬ ತಾಲೂಕಿನಿಂದ 500 ವಾಹನಗಳ ಜಾಥಾ ಮೆರವಣಿಗೆ

ಶೇರ್ ಮಾಡಿ

ನೇಸರ ಆ.26: ಸಮರ ವೀರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆಯನ್ನು ಮಾಣಿ ಜಂಕ್ಷನ್ನಲ್ಲಿ ಸ್ವಾಗತಿಸುವ ಕಾರ್ಯಕ್ರಮಕ್ಕೆ ಕಡಬ ತಾಲೂಕಿನಿಂದ ಸುಮಾರು 500 ವಾಹನಗಳಲ್ಲಿ ಜಾಥಾ ಮೆರವಣಿಗೆ ನಡೆಯಲಿದೆ ಎಂದು ಕಡಬ ತಾಲೂಕು ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ತಮ್ಮಯ್ಯ ಗೌಡ ಸುಳ್ಯ ಹೇಳಿದರು.
ಅವರು ಕಡಬದ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ಮಹಾನಗರ ಪಾಲಿಕೆ ಇವುಗಳ ಆಶ್ರಯದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯಗೌಡರ ಸ್ಮಾರಕ ಉಸ್ತುವಾರಿ ಸಮಿತಿ ಮಂಗಳೂರು ಇವರ ನೇತ್ರತ್ವದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಕಡಬ ತಾಲೂಕಿನ 42 ಗ್ರಾಮಗಳಿಂದ ಜನ ಜಾತಿ ಮತ ಭೇಧ ಮರೆತು ಸಂಘಟಿತರಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಬ್ರಿಟಿಷರ ದಬ್ಬಾಳಿಕೆ, ದಾಸ್ಯ ಪದ್ದತಿಯ ವಿರುದ್ಧ ತುಳುನಾಡಿನ 2000ಕಕೂ ಹೆಚ್ಚು ರೈತಾಪಿ ವರ್ಗದವರಿಗೆ ತರಬೇತಿ ನೀಡಿ ಬ್ರಿಟಿಷರ ವಿರುದ್ದ ಹೋರಾಡಿ ಗೆದ್ದು ಮಂಗಳೂರಿನ ಬಾವುಟಗುಡ್ಡೆಯಲ್ಲಿ ತುಳುನಾಡಿನ ಹೆಮ್ಮೆಯ ಧ್ವಜವನ್ನು ಹಾರಿಸಿ 13 ದಿನಗಳ ಕಾಲ ರಾಜ್ಯಭಾರ ಮಾಡಿದ ನಮ್ಮಜಿಲ್ಲೆಯ ಹೆಮ್ಮೆಯ ಪುತ್ರ, ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿ ವೀರ ಮರಣವನ್ನಪ್ಪಿದ ದಕ್ಷಿಣಕನ್ನಡ ಜಿಲ್ಲೆಯ ಅಮರ ಸುಳ್ಯದ ಸುಪುತ್ರ ಕೆದಂಬಾಡಿ ರಾಮಯ್ಯ ಗೌಡ ಇವರ 11 ಅಡಿ ಎತ್ತರದ ಬಂಗಾರದ ಬಣ್ಣದ ಕಂಚಿನ ಪ್ರತಿಮೆಯನ್ನು ಮಂಗಳೂರಿನ ಬಾವುಟಗುಡ್ಡೆಯಲ್ಲಿ ಪ್ರತಿಷ್ಟಾಪಿಸುವ ಹಾಗೂ ಲೋಕಾರ್ಪಣೆಗೊಳ್ಳುವ ಅದ್ದೂರಿ ಕಾರ್ಯಕ್ರಮಕ್ಕೆ ನಮ್ಮ ಇಂದಿನ ಜನಾಂಗ ಸಾಕ್ಷಿಯಾಗಲಿದೆ ಎಂದರು.
ಕಂಚಿನ ಪ್ರತಿಮೆಯನ್ನು ಸ್ಥಾಪಿಸಲು ಬೇಕಾದ ಅಡಿಪಾಯದ ಕೆಲಸ ಪೂರ್ಣಗೊಂಡು ಈಗಾಗಲೇ ಆಂದ್ರಪ್ರದೇಶದ ವಿಜಯವಾಡದಲ್ಲಿ ನಿರ್ಮಾಣಗೊಂಡು ಆದಿಚುಂಚನಗಿರಿ ಮಠಕ್ಕೆ ತಲುಪಿದ್ದು ಆ 28 ರಂದು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ನೇತ್ರತ್ವದಲ್ಲಿ ಸಾವಿರಾರು ಗಣ್ಯಾತಿ ಗಣ್ಯ ನಾಯಕರ ಸಮ್ಮುಖದಲ್ಲಿ ಚಾಲನೆಗೊಳ್ಳಲಿದೆ.
ಮೈಸೂರು ನಗರ ಮಡಿಕೇರಿ ಮಾರ್ಗ ಮೂಲಕವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕೆದಂಬಾಡಿ ರಾಮಯ್ಯ ಗೌಡರ ಹುಟ್ಟೂರಿಗೆ ಆಗಮಿಸಿ ಅಲ್ಲಿಂದ ವಾಹನಗಳ ಮೂಲಕ ಮೆರವಣಿಗೆಯೊಂದಿಗೆ ಪುತ್ತೂರು ಮಾರ್ಗವಾಗಿ ಆ 29 ರಂದು ಮಧ್ಯಾಹ್ನ 2.00 ಗಂಟೆಗೆ ಮಾಣಿಗೆ ತಲುಪುವ ಪ್ರತಿಮೆಗೆ ಅದ್ದೂರಿ ಸ್ವಾಗತ ನೀಡಲು ಸಕಲ ಸಿದ್ದತೆ ನಡೆಸಲಾಗಿದೆ.
ಸುಬ್ರಹ್ಮಣ್ಯ ಕಡಬ ವ್ಯಾಪ್ತಿಯ ಗ್ರಾಮಗಳ ಜನ ತಮ್ಮ ತಮ್ಮ ವಾಹನಗಳ ಮೂಲಕ ಕಡಬ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ, ಸವಣೂರು, ಆಲಂಕಾರು ವ್ಯಾಪ್ತಿಯ ಗ್ರಾಮಗಳವರು ಆಲಂಕಾರಿನಲ್ಲಿ, ನೆಲ್ಯಾಡಿ ವ್ಯಾಪ್ತಿಯವರು ಉಪ್ಪಿನಂಗಡಿಯಲ್ಲಿ ಸೇರಿಕೊಂಡು ವಾಹನಗಳ ಮೆರವಣಿಗೆ ಯಲ್ಲಿ ಮಾಣಿಗೆ ಸಾಗಿ ಪ್ರತಿಮೆಯ ಪುರಪ್ರವೇಶಕ್ಕೆ ಸ್ವಾಗತ ಕೋರಿ ಮೆರವಣಿಗೆಯಲ್ಲಿ ಮಂಗಳೂರು ತನಕ ಪಾಲ್ಗೊಳ್ಳಲಿದ್ದೇವೆ ಎಂದು ವಿವರಿಸಿದ ತಮ್ಮಯ್ಯ ಗೌಡ ಎಲ್ಲಾ ಸಮುದಾಯದವರ ಸಹಕಾರ ಕೋರಿದರು. ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿರಿದ್ದ ಬಿಜೆಪಿ ಪ್ರಶಿಕ್ಷಣ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಕೃಷ್ಣ ಶೆಟ್ಟಿ ಕಡಬ , ಕಡಬ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಹಿರಿಯ ಮುಖಂಡ ಜನಾರ್ಧನ ಗೌಡ ಪಣೆಮಜಲು ಮಾತನಾಡಿ ಕಾರ್ಯಕ್ರಮ ಸಂಪೂರ್ಣ ಸಹಕಾರ ನೀಡುವುದಾಗಿ ಘೋಷಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ವಾಡ್ಯಪ್ಪ ಗೌಡ ಎರ್ಮಾಯಿಲ್, ಚಂದ್ರಶೇಖರ ಕೋಡಿಬೈಲ್, ಗಣೇಶ್ ಕೈಕುರೆ, ಆಶಾ ತಿಮ್ಮಪ್ಪಗೌಡ , ನೀಲಾವತಿ ಶಿವರಾಂ, ಮಂಜುನಾಥ ಕೋಲಂತಾಡಿ, ಶಿವರಾಮ ಗೌಡ ಏನೆಕಲ್ ಉಪಸ್ಥಿತರಿದ್ದರು.

Leave a Reply

error: Content is protected !!