ನೇಸರ ಡಿ07: ಪುತ್ತೂರಿನ ಮಾಜಿ ಶಾಸಕ ಉರಿಮಜಲು ರಾಮ್‌ಭಟ್‌ರವರು ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದು ಸಂಸ್ಥೆಯ ಬೆಳವಣಿಗೆಗೆ ನಿರಂತರ ಪ್ರೋತ್ಸಾಹ ನೀಡುತ್ತಿದ್ದರು ಎಂದು ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಸಂಚಾಲಕ ಅಬ್ರಹಾಂ ವರ್ಗೀಸ್‌ರವರು ನೆನಪಿಸಿಕೊಂಡಿದ್ದಾರೆ.
1978ರಲ್ಲಿ ನೆಲ್ಯಾಡಿಯಲ್ಲಿ ಸಂತ ಜೋರ್ಜ್ ಪ್ರೌಢಶಾಲೆ ಆರಂಭವಾದಾಗ ರಾಮ್ ಭಟ್‌ರವರು ಪುತ್ತೂರಿನ ಶಾಸಕರಾಗಿದ್ದರು. ಸಂಸ್ಥೆಯ ಸ್ಥಾಪಕರಾದ ಪರಮ ಪೂಜ್ಯ ಬಿಷಪ್‌ರವರೊಂದಿಗೆ ರಾಮ್ ಭಟ್‌ರವರು ತುಂಬಾ ಆತ್ಮೀಯರಾಗಿದ್ದರು. ಶಾಲೆಯ ಮಂಜೂರಾತಿ, ಮಾನ್ಯತೆ, ಅನುದಾನ ಮುಂತಾದ ಇಲಾಖೆಯ ಕಾರ್ಯಗಳಿಗೆ ಸಂಪೂರ್ಣ ಸಹಾಯ,ಸಹಕಾರ ನೀಡಿದರು. ಆ ಕಾಲದಲ್ಲಿ ಒಂದು ಸಾವಿರ ರೂಪಾಯಿ ದೇಣಿಗೆ ನೀಡಿ ಪ್ರೋತ್ಸಾಹಿಸಿದವರು. ನೆಲ್ಯಾಡಿ ಸಮೀಪ ಮಣ್ಣಗುಂಡಿಯಲ್ಲಿ ಅವರ ಕೃಷಿ ಭೂಮಿಯೂ ಇತ್ತು. ಪದವಿ ಪೂರ್ವ ವಿಭಾಗಕ್ಕೆ ಅನುದಾನ ಮಂಜೂರಾತಿಯ ಕಠಿಣ ಪರಿಸ್ಥಿಯಲ್ಲಿ ಶಿಕ್ಷಣ ಸಚಿವರಿಗೆ ಪತ್ರ ಬರೆದು ನನ್ನಲ್ಲಿ ನೀಡಿ ಖುದ್ದು ಅವರ ಕೈಯಲ್ಲಿ ಕೊಡಲು ಹೇಳಿದ್ದು ಹಾಗೂ ಸಚಿವರು ಒಪ್ಪಿಗೆ ನೀಡಿ ಉಪನ್ಯಾಸಕರ ವೇತನ ಅನುದಾನ ಬಿಡುಗಡೆಗೆ ಆದೇಶ ಹೊರಡಿಸಿದ್ದು ನಾನು ಮರೆಯಲಾರೆ. ಭೇಟಿಯಾದಗಲೆಲ್ಲ ಸಂಸ್ಥೆಯ ಬೆಳವಣಿಗಯನ್ನು ವಿಚಾರಿಸುತಿದ್ದರು. ಅವರು ಯಾವುದೇ ಪಕ್ಷದಲ್ಲಿರಲಿ ಅವರ ವಿಶಾಲ ಜ್ಯಾತ್ಯತೀತ ಮನೋಭಾವ, ವಿದ್ಯಾ ಪ್ರೇಮ, ಆತ್ಮೀಯತೆ, ಮುತ್ಸದ್ದಿತನ, ನೇರ ನಡೆ ನುಡಿ, ನಿಸ್ವಾರ್ಥ ಸೇವಾ ಗುಣ ಅನುಕರಣೀಯವಾದದ್ದು. ಒಂಬತ್ತು ದಶಕಗಳ ಸಾರ್ಥಕ ಬದುಕನ್ನು ಪೂರೈಯಿಸಿ ಇಹಲೋಕ ತ್ಯಜಿಸಿದ ರಾಮ್ ಭಟ್‌ರವರ ಆತ್ಮಕ್ಕೆ ಪರಮಾತ್ಮನು ಶಾಂತಿ ನೀಡಲೆಂದು ಸಂತ ಜೋರ್ಜ್ ವಿದ್ಯಾ ಸಂಸ್ಥೆಯ ಪರವಾಗಿ ಪ್ರಾರ್ಥಿಸುವುದಾಗಿ ಅಬ್ರಹಾಂ ವರ್ಗೀಸ್‌ರವರು ಹೇಳಿದ್ದಾರೆ.