ಪುತ್ತೂರು: ನವೆಂಬರ್ 4ರಂದು ಶುಕ್ರವಾರ ಸಂಜೆ 4ರಿಂದ ಪುತ್ತೂರು ಪುರಭವನದಲ್ಲಿ ತೆಂಕು- ಬಡಗು ಸಮ್ಮಿಲನದಲ್ಲಿ ಅಪೂರ್ವ ಯಕ್ಷ -ನಾಟ್ಯ ವೈಭವ ನಡೆಯಲಿದೆ.
ಸಾರ್ವಜನಿಕರಿಗೆ ಉಚಿತ ಪ್ರವೇಶ. ತೆಂಕು- ಬಡಗು ತಿಟ್ಟುಗಳ ಪ್ರಸಿದ್ಧ ಆರು ಭಾಗವತರ ಗಾಯನ ವೈಭವ ವಿಜೃಂಭಿಸಲಿದೆ.
ಮೈನವಿರೇಳಿಸುವ ತೆಂಕು- ಬಡಗುಗಳ ನಾಟ್ಯ ವೈಭವ ಮನ ರಂಜಿಸಲಿದೆ. ದ್ವಂದ್ವ ಚೆಂಡೆ, ದ್ವಂದ್ವ ಮದ್ದಳೆಗಳು ಅಬ್ಬರಿಸಲಿವೆ. ಭಾಗವತ ಪಟ್ಲ ಸತೀಶ್ ಶೆಟ್ಟಿ, ಗಿರೀಶ್ ರೈ ಕಕ್ಕೆಪದವು, ಗಣೇಶ್ ಭಟ್ ಹೊಸಮೂಲೆ, ಜನ್ಸಾಲೆ ರಾಘವೇಂದ್ರ ಆಚಾರ್, ರಾಘವೇಂದ್ರ ಮಯ್ಯ ಹಾಲಾಡಿ, ರಾಮಕೃಷ್ಣ ಹೆಗಡೆ ಹಿಲ್ಲೂರು ಹಾಡುಗಾರಿಕೆ ಸವಿಯುವ ಅವಕಾಶವಿದೆ. ತೆಂಕು ಶೈಲಿಯಲ್ಲಿ ಸುಬ್ರಹ್ಮಣ್ಯ ಭಟ್ ದೇಲಂತಮಜಲು, ಮಯೂರ್ ನಾಯ್ಗ, ಬಡಗುಶೈಲಿಯಲ್ಲಿ ಸುನಿಲ್ ಭಂಡಾರಿ ಮತ್ತು ಸುಜನ್ ಹಾಲಾಡಿ ಚೆಂಡೆಯಬ್ಬರ- ಮದ್ದಲೆಯ ನಾದನಿನಾದ ಮೂಡಿಬರಲಿದೆ. ಅಕ್ಷಯ ಕುಮಾರ್ ಮಾರ್ನಾಡು ಮತ್ತು ರಕ್ಷಿತ್ ಶೆಟ್ಟಿ ಪಡ್ರೆ ನಿಹಾರಿಕಾ ಮತ್ತು ಉಪಾಸನಾ ಪಂಜರಿಕೆ ನಾಟ್ಯ ಮಾಡಲಿದ್ದಾರೆ.
ಜತೆಗೆ ಮೋಕ್ಷ ಸಂಗ್ರಾಮ ಎಂಬ ಒಂದು ಗಂಟೆಯ ಪ್ರಸಂಗವೂ ತೆಂಕು- ಬಡಗು ಸಮ್ಮಿಶ್ರಣದಲ್ಲಿ ಮೇಳವಿಸಲಿದೆ. ಗಣೇಶ್ ಭಟ್ ಹೊಸಮೂಲೆ ಮತ್ತು ರಾಮಕೃಷ್ಣ ಹೆಗಡೆ ಹಿಲ್ಲೂರು ಭಾಗವತಿಕೆ ದ್ವಂದ್ವ ನಡೆಯಲಿದೆ. ಸುಧನ್ವನಾಗಿ ಮಂಕಿ ಈಶ್ವರ ನಾಯ್ಕ, ಅರ್ಜುನನಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್, ಕೃಷ್ಣನಾಗಿ ಪೆರ್ಮು ದೆ ಜಯಪ್ರಕಾಶ್ ಶೆಟ್ಟಿ ಮಿಂಚಲಿದ್ದಾರೆ.