ಬೆಳಾಲು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಬೆಳಾಲು ಇದರ ವತಿಯಿಂದ ಬೆಳಾಲು ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ, ಕೋಲ್ಪಾಡಿ ಇಲ್ಲಿಗೆ ಕೊಡುಗೆಯಾಗಿ ನೀಡಿದ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆಯನ್ನು ನ.09ರಂದು ಶಾಲೆಯಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ಸಹಕಾರಿ ಸಂಘದ ಅಧ್ಯಕ್ಷ ಹೆಚ್. ಪದ್ಮ ಗೌಡರು ನೆರವೇರಿಸಿ, ಸಂಘದ ಸದಸ್ಯರ ವ್ಯವಹಾರದಿಂದ ಸಿಕ್ಕಿದ ಲಾಭಾಂಶದಲ್ಲಿ ಸಂಘವು ಪೂರೈಸಿದ ಈ ಶುದ್ಧ ನೀರಿನ ಸೌಲಭ್ಯವನ್ನು ಮಕ್ಕಳು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.
ಸಂಘದ ನಿರ್ದೇಶಕರಾದ ಸುಲೈಮಾನ್ ರವರು ಮಾತನಾಡಿ, ಸಂಘವು ನೀಡಿದ ಕೊಡುಗೆಗಾಗಿ ಇತರರಿಗೆ ಮಾದರಿ, ಯೋಗ್ಯ ಸರಳ ಕೃತಜ್ಞತಾ ಸಮಾರಂಭ ಏರ್ಪಡಿಸಿದ್ದಕ್ಕಾಗಿ ಶಾಲೆಯವರನ್ನು ಮತ್ತು ಬೆಳಾಲು ಎಸ್ ಡಿ ಎಮ್ ಹೈಸ್ಕೂಲ್ ತಾಲೂಕಿನ ಏಕೈಕ “ಉತ್ತಮ ಕನ್ನಡ ಶಾಲೆ” ಯಾಗಿ ರಾಜ್ಯ ಮಟ್ಟದ 18,000 ಶಾಲೆಗಳಲ್ಲಿ ಪುರಸ್ಕಾರಕ್ಕೆ ಆಯ್ಕೆಯಾದ ಸಂತಸದ ವಿಚಾರವನ್ನು ಕೂಡಾ ಹೈಸ್ಕೂಲ್ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರ ನೆಲೆಯಲ್ಲಿ ಹಂಚಿಕೊಂಡರು.
ಬೆಳಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ತನ್ನ ಸಾಮಾಜಿಕ ಜವಾಬ್ದಾರಿ ನೆಲೆಯಲ್ಲಿ ಬೆಳಾಲು ಗ್ರಾಮದ ಏಳು ಅಂಗನವಾಡಿಗಳಿಗೆ ಮತ್ತು ನಾಲ್ಕು ಶಾಲೆಗಳಿಗೆ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಉಚಿತವಾಗಿ ಒದಗಿಸಿದೆ. ಇದೇ ರೀತಿಯಲ್ಲಿ ಗ್ರಾಮದ ಹಲವಾರು ಕಾರ್ಯಕ್ರಮಗಳಿಗೆ ಸಂಘವು ಸಾಧ್ಯವಾದಷ್ಟು ನೆರವು ನೀಡುತ್ತಿದೆ.
ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಮಾಧವ ಗೌಡರು ಅಧ್ಯಕ್ಷತೆ ವಹಿಸಿದ್ದು, ನೀಡಿದ ಕೊಡುಗೆಗಾಗಿ ಧನ್ಯವಾದ ಸಲ್ಲಿಸಿದರು. ಸಹಕಾರಿ ಸಂಘದ ಉಪಾಧ್ಯಕ್ಷ ಸುರೇಂದ್ರ ಗೌಡ, ನಿರ್ದೇಶಕರುಗಳಾದ ದಾಮೋದರ ಗೌಡ, ವಿಜಯ ಗೌಡ, ಮಾಣಿಗ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾರಾಯಣ ಗೌಡ, ಶಾಲಾ ಮುಖ್ಯ ಗುರುಗಳು ಮತ್ತು ಶಿಕ್ಷಕರು, ಪ್ರತಿಮಾ, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು ಹಾಗೂ ವಿದ್ಯಾರ್ಥಿಗಳು ಮತ್ತು ಪೋಷಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಹಿರಿಯ ಗೌರವ ಶಿಕ್ಷಕ ಕರಿಯಣ್ಣ ಗೌಡ ಧನ್ಯವಾದ ಸಲ್ಲಿಸಿದರು.