ನ.13: ಕಡಬದಲ್ಲಿ ದ.ಕ.ಜಿಲ್ಲಾ ಮಾಜಿ ಸೈನಿಕರ ಸಂಘ ಉದ್ಘಾಟನೆ

ಶೇರ್ ಮಾಡಿ

ಕಡಬ: ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ದ.ಕ. ಜಿಲ್ಲೆ ಮತ್ತು ತಾಲೂಕು ಘಟಕಗಳ ಉದ್ಘಾಟನೆ ಹಾಗೂ ಸಾಧಕ ಮಾಜಿ ಸೈನಿಕರಿಗೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪುರಸ್ಕಾರ ನೀಡಿ ಗೌರವಿಸುವ ಕಾರ್ಯಕ್ರಮವು ನ.13 ರಂದು ಕಡಬದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಸಭಾಂಗಣದಲ್ಲಿ ಜರಗಲಿದೆ ಎಂದು ದ.ಕ.ಜಿಲ್ಲಾ ಮಾಜಿ ಸೈನಿಕರ ಸಂಘದ ಅದ್ಯಕ್ಷ ಜೆ.ಪಿ.ಎಂ. ಚೆರಿಯನ್ ಅವರು ತಿಳಿಸಿದ್ದಾರೆ.
ಅವರು ಕಡಬದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಸಮಾರಂಭದಲ್ಲಿ ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ. ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ರಾಜ್ಯಾಧ್ಯಕ್ಷ ಡಾ.ಶಿವಣ್ಣ ಎನ್.ಕೆ. ಅಧ್ಯಕ್ಷತೆ ವಹಿಸಲಿದ್ದು, ಕಡಬದ ಸೈಂಟ್ ಜೋಕಿಮ್ ವಿದ್ಯಾಸಂಸ್ಥೆಗಳ ಸಂಚಾಲಕ ವಂ.ಅರುಣ್ ವಿಲ್ಸನ್ ಲೋಬೊ, ಕರ್ನಾಟಕ ಮೇಲ್ಮನವಿ ನ್ಯಾಯಾಧೀಶ ಸದಾಶಿವ ಪ್ರಭು ಎಲ್ಲಾರೆ, ದ.ಕ. ಜಿಲ್ಲಾ ಹೆಚ್ಚುವರಿ ಪೊಲೀಸ್ ಆಯುಕ್ತ ಕುಮಾರ ಚಂದ್ರ, ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್, ವೀರನಾರಿ ರಾಜ್ಯಾಧ್ಯಕ್ಷೆ ರಜನಿ ಸುಬ್ಬಯ್ಯ, ಕಡಬ ತಹಶೀಲ್ದಾರ್ ರಮೇಶ್ ಬಾಬು, ಕಡಬ ಆರಕ್ಷಕ ಉಪನಿರೀಕ್ಷಕ ಆಂಜನೇಯ ರೆಡ್ಡಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸೇವಾವಧಿಯಲ್ಲಿ ಅತ್ಯಂತ ಸಂಕಷ್ಟದ ಪರಿಸ್ಥಿತಿಗಳನ್ನು ಎದುರಿಸಿ ತಮ್ಮ ಯೌವನದ ಎಲ್ಲಾ ಸುಖಗಳನ್ನು ತ್ಯಜಿಸಿ ದೇಶಕ್ಕಾಗಿ ದುಡಿದ ಸೈನಿಕರಿಗೆ ಅವರ ಸೇವಾ ನಿವೃತ್ತಿಯ ಬಳಿಕ ನೆಮ್ಮದಿಯ ಜೀವನವನ್ನು ಕಟ್ಟಿಕೊಳ್ಳುವ ಸಲುವಾಗಿ ಸರಕಾರವು ಹಲವಾರು ಸವಲತ್ತುಗಳನ್ನು ವ್ಯವಸ್ಥೆಗೊಳಿಸಿದೆ. ಆದರೆ ಅವುಗಳು ಸಮರ್ಪಕವಾಗಿ ಅನುಷ್ಠಾನವಾಗದೇ ಇರುವುದರಿಂದ ನಿವೃತ್ತ ಸೈನಿಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಿವೃತ್ತ ಸೈನಿಕರು ತಮಗಾಗಿ ಮೀಸಲಾಗಿರುವ ಸರಕಾರದ ಸವಲತ್ತುಗಳನ್ನು ಪಡೆದುಕೊಳ್ಳುವಲ್ಲಿ ಸಹಕರಿಸುವುದು ಮತ್ತು ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಸಂಘಟಿತ ಹೋರಾಟ ನಡೆಸುವ ನಿಟ್ಟಿನಲ್ಲಿ ನಾವು ಸಂಘಟನೆಯನ್ನು ಕಟ್ಟುತ್ತಿದ್ದೇವೆ ಎಂದು ಜೆ.ಪಿ.ಎಂ. ಚೆರಿಯನ್ ಅವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ದ.ಕ.ಜಿಲ್ಲಾ ಘಟಕದ ಗೌರವಾಧ್ಯಕ್ಷ ವಾಸುದೇವ ಬಾನಡ್ಕ, ವೀರನಾರಿ ಘಟಕದ ದ.ಕ.ಜಿಲ್ಲಾಧ್ಯಕ್ಷ ಗೀತಾ ಅಮೈ ಕೇವಳ, ಕಡಬ ತಾಲೂಕು ಘಟಕದ ಗೌರವಾಧ್ಯಕ್ಷ ಮ್ಯಾಥ್ಯೂ ಟಿ.ಜಿ., ಅಧ್ಯಕ್ಷ ಸೈಮನ್ ಕೆ.ಸಿ., ಕೋಶಾಧಿಕಾರಿ ಸುಬ್ರಾಯ ಬೈಪಾಡಿತ್ತಾಯ ಅವರು ಉಪಸ್ಥಿತರಿದ್ದರು.

Leave a Reply

error: Content is protected !!