ನೆಲ್ಯಾಡಿ: ವಿಶ್ವವಿದ್ಯಾನಿಲಯ ಘಟಕ ಕಾಲೇಜಿನಲ್ಲಿ ಇಂದು “ರಾಷ್ಟ್ರೀಯ ಐಕ್ಯತಾ ಸಪ್ತಾಹ” ಕಾರ್ಯಕ್ರಮದಡಿ ರಾಜ್ಯಶಾಸ್ತ್ರ ವಿಭಾಗದ ಸಹಯೋಗದಲ್ಲಿ “ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ” ಎಂಬ ವಿಚಾರದ ಕುರಿತು ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನಾ ಮತ್ತು ಲೆಕ್ಕ ಪತ್ರ ಇಲಾಖೆಗೆ ಸಹಾಯಕ ನಿಯಂತ್ರಕರಾಗಿ ಆಯ್ಕೆಯಾಗಿರುವಂತಹ ಶ್ರೀಮತಿ ಆಸ್ಮಾ ಕೆ ರವರು ಮಾತನಾಡಿ “ಮಹಿಳೆಯರು ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕು. ಶಿಕ್ಷಣಕ್ಕೆ ಬಡತನ ಅಡ್ಡಿಯಾಗಬಾರದು, ಗುರಿಯನ್ನು ತಲುಪಲು ನಿರಂತರ ಪರಿಶ್ರಮವೊಂದೇ ಮಾರ್ಗ” ಎಂಬ ಸ್ಪೂರ್ತಿದಾಯಕ ಮಾತುಗಳನ್ನು ಹೇಳಿದರು.
ಮುಖ್ಯ ಅತಿಥಿಗಳಾಗಿ ನೆಲ್ಯಾಡಿಯ ಕಾಮಧೇನು ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾಗಿರುವ ಶ್ರೀಮತಿ ಉಷಾ ಅಂಚನ್ ರವರು ಪಾಲ್ಗೊಂಡು “ದೃಢ ವಿಶ್ವಾಸವೊಂದೇ ನಮ್ಮನ್ನು ಗೆಲ್ಲಿಸಲು ಸಾಧ್ಯ ಎಂದು ಹೇಳುವ ಮೂಲಕ ತಮ್ಮ ಕಾಮಧೇನು ಮಹಿಳಾ ಸಹಕಾರ ಸಂಘದಲ್ಲಿನ ಸಾಲಸೌಲಭ್ಯಗಳು, ಬಡವಿದ್ಯಾರ್ಥಿಗಳಿಗೆ ಸಹಾಯಧನ ಮತ್ತು ಇನ್ನಿತರ ಯೋಜನೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಸಂಯೋಜಕರಾದಂತಹ ಡಾ.ಜಯರಾಜ್ .ಎನ್ ರವರು ವಹಿಸಿಕೊಂಡು “ನಿರಂತರ ಪರಿಶ್ರಮ, ಹಠವೊಂದಿದ್ದರೆ ಎಂತಹ ಗುರಿಯನ್ನಾದರೂ ಸಾಧಿಸಬಹುದು. ಮಹಿಳೆಯರು ರಾಷ್ಟ್ರ ನಿರ್ಮಾಣದಲ್ಲಿ ತಮ್ಮ ಕೊಡುಗೆಯನ್ನು ನೀಡುತ್ತಾ ಬರುತ್ತಿದ್ದಾರೆ” ಎಂಬ ವಿಚಾರವನ್ನು ವ್ಯಕ್ತಪಡಿಸಿದರು.
ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕರು ಮತ್ತು ಕನ್ನಡ ಸಂಘದ ಸಂಚಾಲಕರಾದ ಶ್ರೀಮತಿ ಹೇಮಾವತಿಯವರು ಮಾತನಾಡಿ “ಸಮಾಜದಲ್ಲಿ ಲಿಂಗ ತಾರತಮ್ಯವು ಅನೇಕ ಪರಿಭಾಷೆಗಳಲ್ಲಿ ಮತ್ತು ಅನೇಕ ಮನಸ್ಥಿತಿಗಳಲ್ಲಿ ಇನ್ನೂ ಉಳಿದುಕೊಂಡಿದೆ. ಸ್ತ್ರೀ ಮತ್ತು ಪುರುಷರಿಬ್ಬರೂ ರಥದ ಎರಡು ಚಕ್ರಗಳಂತೆ ಸಮಾನರು” ಎಂಬ ಅಂಶವನ್ನು ತಿಳಿಸಿದರು..
ಕಾಲೇಜಿನ ಸಹಸಂಯೋಜಕರಾದ ಡಾ.ಸೀತಾರಾಮ ಪಿ ಇವರು ಮಾತನಾಡಿ “ಮಹಿಳೆಯರು ಪುರುಷರಷ್ಟೇ ಶಕ್ತರಾಗಿ ಮುನ್ನುಗ್ಗುವುದೇ ಆಕೆಗಿರುವ ಸ್ವಾತಂತ್ರ್ಯ” ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಸುರೇಶ್ ಕೆ ಇವರು ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಚಾಲಕರಾದ ಕು.ಡೀನಾ ಪಿ.ಪಿ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾರ್ಥಿಗಳಾದ ಭಾರತಿ ಮತ್ತು ತಂಡದಿಂದ ಮಹಿಳೆಯರ ಅಸ್ತಿತ್ವವನ್ನು ಬಿತ್ತರಿಸುವ ಗೀತೆಯನ್ನು ಹಾಡಿದರು. ಕಾರ್ಯಕ್ರಮದಲ್ಲಿ ನೆರೆದಿದ್ದ ಸರ್ವರನ್ನು ವಾಣಿಜ್ಯ ವಿಭಾಗದ ಉಪನ್ಯಾಸಕರಾದಂತಹ ಶ್ರೀಮತಿ ದಿವ್ಯಶ್ರೀ .ಜಿ ಇವರು ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿಗಳ ವ್ಯಕ್ತಿಪರಿಚಯವನ್ನು ವಾಣಿಜ್ಯ ವಿಭಾಗದ ಮುಖ್ಯಸ್ಥರಾದಂತಹ ಶ್ರೀಮತಿ ವೆರೋನಿಕಾ ಪ್ರಭಾರವರು ನಡೆಸಿಕೊಟ್ಟರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ನೂರಂದಪ್ಪ ಇವರು ಕಾರ್ಯಕ್ರಮದಲ್ಲಿ ಸಾಕ್ಷಿಯಾದ ಸರ್ವರನ್ನು ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ವಿಭಾಗದ ಉಪನ್ಯಾಸಕರು, ಬೋಧಕ-ಬೋಧಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು. ಪ್ರಮುಖ ಕೇಂದ್ರಬಿಂದುಗಳಾಗಿ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿನಿ ಧನ್ಯಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು.