ಭೂಹಗರಣ ಆರೋಪ ಹೊತ್ತಿರುವ ಕಡಬ ತಹಸೀಲ್ದಾರ್ ಅವರನ್ನು ಹುದ್ದೆಯಿಂದ ತೆರವುಗೊಳಿಸದಿದ್ದರೆ ಪ್ರತಿಭಟನೆ : ನೀತಿ ತಂಡ ಎಚ್ಚರಿಕೆ

ಶೇರ್ ಮಾಡಿ

ಕಡಬ:ಭೂಹಗರಣಕ್ಕೆ ಸಂಬoಧಪಟ್ಟoತೆ ಮೈಸೂರಿನಲ್ಲಿ ಪ್ರಕರಣ ದಾಖಲಾಗಿ ಆರೋಪ ಎದುರುಸುತ್ತಿರುವ ಕಡಬ ತಹಸೀಲ್ದಾರ್ ರಮೇಶ್ ಬಾಬು ಅವರನ್ನು ಹದಿನೈದು ದಿಗಳ ಒಳಗೆ ಹುದ್ದೆಯಿಂದ ತೆರವುಗೊಳಿಸದಿದ್ದರೆ ಉಗ್ರ ಪ್ರತಿಭಟನೆ ಎದುರಿಸಬೇಕಾಗಿತ್ತು ಎಂದು ನೀತಿ ತಂಡ ರಾಜ್ಯಾಧ್ಯಕ್ಷ ಜಯಂತ್ ಟಿ.ಕೆ ಎಚ್ಚರಿಸಿದರು.

ಅವರು ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಭ್ರಷ್ಟಾಚಾರ ಆರೋಪ ಹೊತ್ತಿರುವ ರಮೇಶ್ ಬಾಬು ಕಡಬಕ್ಕೆ ಬೇಡವೇ ಬೇಡ ಎಂದು ಹೇಳಿದರು.
ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಹಿಮ್ಮಾವು ಗ್ರಾಮದ ಸರ್ವೆ ನಂ.390 ರಿಂದ 422 ಮತ್ರು 424 ರ ಜಮೀನುಗಳಿಗೆ ಸಂಭಂಧಿಸಿದಂತೆ ಅಕ್ರಮವಾಗಿ ಪೌತಿ ಖಾತೆ ಮಾಡಿ 891 ಎಕ್ರೆ ಜಾಗವನ್ನು ಅಕ್ರಮವಾಗಿ ಮಾರಾಟ ಮಾಡಲಿಕ್ಕೆ ಕಾರಣರಾಗಿರುವ ಹಗರಣದಲ್ಲಿ ಸರ್ಕಾರಕ್ಕೆ 79 ಕೋಟಿ 29 ಲಕ್ಷ ನಷ್ಟ ಉಂಟಾಗಿರುವ ಹಿನ್ನೆಲೆಯಲ್ಲಿ 16 ಜನ ಕಂದಾಯ ಅಧಿಕಾರಿಗಳ ವಿರುದ್ಧ 26-12-2022 ರಂದು ನಂಜನಗೂಡು ಟೌನ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಪೈಕಿ ಅಂದು ಶಿರಸ್ತೇದಾರಾಗಿದ್ದ ಇಂದಿನ ಕಡಬ ತಹಸೀಲ್ದಾರ್ ರಮೇಶ್ ಬಾಬು ಕೂಡಾ ಓರ್ವರಾಗಿದ್ದಾರೆ.
ಇಷ್ಟೊಂದು ದೊಡ್ಡ ಹಗರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಕಳಂಕಿತ ವ್ಯಕ್ತಿ ರಮೇಶ್ ಬಾಬು ಅವರು ಕಡಬ ತಹಸೀಲ್ದಾರ್ ಆಗಿ ಮುಂದುವರಿಯುವ ನೈತಿಕತೆ ಇಲ್ಲ. ಈಗಾಗಲೇ ಕಡಬ ತಾಲೂಕಿನ ಎಲ್ಲಾ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಯಾವುದೇ ಕೆಲಸವಾಗಬೇಕಿದ್ದರೂ ಹಣ ಇಲ್ಲದೆ ಕೆಲಸವಾಗುತ್ತಿಲ್ಲ. ಹಣವಂತರು ಮಾತ್ರ ತಮ್ಮ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಗ್ರಾಮ ಮಟ್ಟದಿಂದಲೇ ಬ್ರೋಕರ್‌ಗಳ ಮೂಲಕ ಅಧಿಕಾರಿಗಳು ಅವ್ಯವಹಾರ ನಡೆಸುತ್ತಿದ್ದಾರೆ. ಇಂತಹ ಅಧಿಕಾರಿಗಳಿಂದ ಕಡಬವನ್ನು ಪಾರು ಮಾಡಬೇಕಿದೆ. ಭ್ರಷ್ಟಾಚಾರದ ಆರೋಪ ಹೊತ್ತಿರುವ ತಹಸೀಲ್ದಾರ್ ರಮೇಶ್ ಬಾಬು ಅವರನ್ನು ಸೇವೆಯಿಂದ ತೆರವು ಮಾಡಬೇಕೆಂದು ಜಿಲ್ಲಾಧಿಕಾರಿಯವರಿಗೆ ಅರ್ಜಿ ನೀಡಲಾಗಿತ್ತು. ಈ ಬಗ್ಗೆ ಕ್ರಮ ಜರಗಿಸುವ ಭರವಸೆ ದೊರೆತಿದೆ. ಅದರೂ ತಮ್ಮ ಪ್ರಭಾವ ಬಳಸಿಕೊಂಡು ರಮೇಶ್ ಬಾಬು ಅಧಿಕಾರದಲ್ಲಿ ಮುಂದುವರಿಯುತ್ತಿದ್ದಾರೆ. 15 ದಿನಗಳ ಒಳಗೆ ಅವರನ್ನು ಸೇವೆಯಿಂದ ತೆರವುಗೊಳಿಸಿದ್ದರೆ ಕಡಬ ತಾಲೂಕು ಕಛೇರಿ ಎದುರು ವಿವಿಧ ಸಂಘಸಂಸ್ಥೆಗಳೊಂದಿಗೆ ಸೇರಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಜಯಂತ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನೀತಿ ತಂಡದ ಪ್ರಮುಖ ಸಾಬು ಉರುಂಬಿಲ್ ಉಪಸ್ಥಿತರಿದ್ದರು.

Leave a Reply

error: Content is protected !!