ಯಕ್ಷಗಾನ ಮೇರುಭಾಗವತರಾದ ಬಲಿಪ ನಾರಾಯಣ ಭಾಗವತರು(85) ಗುರುವಾರ ಸಂಜೆ ಮೂಡುಬಿದಿರೆಯ ಆಸ್ಪತ್ರೆಯಲ್ಲಿ ನಿಧನರಾದರು. ಕಳೆದ 15 ದಿನಗಳಿಂದ ವಯೋಸಹಜ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಮೂಡುಬಿದಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.
ಬಲಿಪ ನಾರಾಯಣ ಭಾಗವತರು ಮೂಲತಃ ಕಾಸರಗೋಡು ಜಿಲ್ಲೆಯ ಪಡ್ರೆ ಗ್ರಾಮದವರು. ಮೂಡಬಿದಿರೆಯ ಸಮೀಪದ ನೂಯಿ ಎಂಬಲ್ಲಿ ವಾಸವಾಗಿದ್ದರು. ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದಲ್ಲಿ ಹಲವಾರು ವರ್ಷ ಭಾಗವತರಾಗಿ ಸೇವೆ ಸಲ್ಲಿಸಿದ್ದರು.
ದೇವಿ ಮಾಹಾತ್ಮೆ, ಕಟೀಲು ಕ್ಷೇತ್ರ ಮಾಹಾತ್ಮೆ, ತೆಂಕು ತಿಟ್ಟಿನ ಎಲ್ಲಾ ಪೌರಾಣಿಕ ಪ್ರಸಂಗಳ ಪದ್ಯಗಳಿಗೆ ತನ್ನ ಪರಿಪೂರ್ಣ ಯಕ್ಷಗಾನೀಯ ಶೈಲಿಯ ಏರು ಸ್ವರದ ಭಾಗವತಿಕೆಯ ಮೂಲಕ ಪರಿಪೂರ್ಣ ನ್ಯಾಯ ಒದಗಿಸಿಕೊಟ್ಟವರು ಬಲಿಪ ಭಾಗವತರು.
ಬಲಿಪ ನಾರಾಯಣ ಭಾಗವತರು 60ಕ್ಕೂ ಹೆಚ್ಚು ವರ್ಷಗಳ ಕಾಲ ಸುದೀರ್ಘ ಯಕ್ಷಗಾನ ಕಲಾ ಸೇವೆ ಸಲ್ಲಿಸಿದ್ದಾರೆ. ಪಡ್ರೆ ಜಠಾಧಾರಿ ಮೇಳವನ್ನು ಮೊದಲಿಗೆ ಆರಂಭಿಸಿದ್ದರು. ಯಕ್ಷಗಾನದ 50ಕ್ಕೂ ಹೆಚ್ಚು ಪ್ರಸಂಗಗಳ ಕಂಠಪಾಠ ಬಲಿಪ ಭಾಗವತರಿಗಿತ್ತು. 30 ಪ್ರಕಟಿತ ಮತ್ತು 15 ಅಪ್ರಕಟಿತ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ.
ತೆಂಕು ತಿಟ್ಟು ಯಕ್ಷ ರಂಗದ ಭೀಷ್ಮ ಎಂದು ಕರೆಯುತ್ತಿದ್ದರು. ಯಕ್ಷಾಭಿಮಾನಿಗಳು ಬಲಿಪ ಅಮೃತ ಭವನವನ್ನು ಕಟ್ಟಿಸಿಕೊಟ್ಟಿದ್ದಾರೆ. ಬಲಿಪ ನಾರಾಯಣ ಭಾಗವತರು “ಐದು ದಿನದ ದೇವಿ ಮಹಾತ್ಮೆ” ಎಂಬ ಮಹಾಪ್ರಸಂಗವನ್ನು ರಚಿಸಿದ್ದು ಯಕ್ಷಗಾನದ ಇತಿಹಾಸದಲ್ಲೇ ಮಹತ್ವದ ಕೃತಿಯಾಗಿ ಮೂಡಿ ಬಂದಿದೆ.
ಕಲಾಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಾಮಗ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ `ಜ್ಞಾನ ಪ್ರಶಸ್ತಿ’, ಕರ್ನಾಟಕ ಜಾನಪದ ಪರಿಷತ್ತು ದೊಡ್ಡಮನೆ ಲಿಂಗೇಗೌಡ ಪ್ರಶಸ್ತಿ, 71ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ `ಕರ್ನಾಟಕ ಶ್ರೀ ‘ಪ್ರಶಸ್ತಿ, ಪದವೀಧರ ಯಕ್ಷಗಾನ ಮಂಡಳಿ ಮುಂಬಯಿ `ಅಗರಿ ಪ್ರಶಸ್ತಿ’, ಶೇಣಿ ಪ್ರಶಸ್ತಿ, ಕವಿ ಮುದ್ದಣ ಪುರಸ್ಕಾರ, ಕೂಡ್ಲು ಸುಬ್ರಾಯ ಶ್ಯಾನುಭೋಗ ಪ್ರಶಸ್ತಿ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ವತಿಯಿಂದ ಬೆಂಗಳೂರಿನ ರಾಜ್ಯಮಟ್ಟದ ಸನ್ಮಾನ, ಕರ್ನಾಟಕ ಸಂಘ ದುಬೈಯಲ್ಲಿ ಸನ್ಮಾನ, ಆಳ್ವಾಸ್ ನುಡಿಸಿರಿ ಪ್ರಶಸ್ತಿ ಸೇರಿದಂತೆ ನೂರಾರು ಗೌರವಗಳು ಅವರಿಗೆ ಸಂದಿವೆ.
ಬಲಿಪ ಭಾಗವತರ ನಿಧಾನಕ್ಕೆ ಗಣ್ಯರು, ಜನಪ್ರತಿನಿಧಿಗಳು ಸೇರಿ ಸಾವಿರಾರು ಮಂದಿ ಕಲಾವಿದರು ತೀವ್ರ ಸಂತಾಪ ಸೂಚಿಸಿದ್ದಾರೆ.