ಚುನಾವಣೆಯಲ್ಲಿ ಹಿಂದುತ್ವದ ಚಿಂತನೆಗಳಿಗೆ ಶಕ್ತಿ ಕೊಡುವ ಪಕ್ಷ ಬೆಂಬಲಿತ ವ್ಯಕ್ತಿಗಳನ್ನು ಗೆಲ್ಲಿಸಿ- ಸ್ವಾಮೀಜಿಗಳ ಕರೆ

ಶೇರ್ ಮಾಡಿ

ಪುತ್ತೂರು: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸಿದ್ಧಾಂತ ಆಧಾರಿತ, ಹಿಂದುತ್ವ ಮತ್ತು ಅಭಿವೃದ್ಧಿ ಚಿಂತನೆಗಳಿಗೆ ಶಕ್ತಿ ಕೊಡುವ ಪಕ್ಷ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠ ಹಾಗೂ ಮಾಣಿಲ ಶ್ರೀಧಾಮ ಮಠದ ಸ್ವಾಮೀಜಿಯವರು ಪತ್ರಿಕಾ ಹೇಳಿಕೆಯ ಮೂಲಕ ಕರೆ ನೀಡಿದ್ದಾರೆ.

ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರು ಪತ್ರಿಕಾ ಹೇಳಿಕೆ ನೀಡಿ, ಧರ್ಮ ಹಾಗೂ ರಾಷ್ಟ್ರಜೀವನ ಒಂದಕ್ಕೊಂದು ಪೂರಕವಾದದ್ದು. ರಾಷ್ಟ್ರವೊಂದು ಸದೃಢವಾಗಬೇಕಾದರೆ ರಾಷ್ಟ್ರ ಜೀವನಕ್ಕೆ ಕೊಂಡಿಯಾದ ಧರ್ಮದ ಅಭ್ಯುದಯವಾಗಬೇಕು.

ಧರ್ಮದಲ್ಲಿ ರಾಜಕೀಯ ಬೆರೆತಾಗ ಸಮಸ್ಯೆ. ಅದೇ ರಾಜಕಾರಣದಲ್ಲಿ ಧರ್ಮ ಇದ್ದಾಗ ಎಲ್ಲವೂ ಸುಲಲಿತ. ಇದಕ್ಕೆ ಆಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮಚಂದ್ರ ಮಂದಿರವೇ ಸಾಕ್ಷಿ. ವರ್ತಮಾನದಲ್ಲಿ ರಾಜ್ಯ ಹಾಗೂ ದೇಶದಲ್ಲಿ ನಡೆಯುತ್ತಿರುವ ಹಿಂದೂ ಪರವಾದ ಧರ್ಮಾಧಾರಿತ ಚಟುವಟಿಕೆಗಳು, ಅಭಿವೃದ್ಧಿ ಕೆಲಸಗಳು ಸುಖೀ ಸಮೃದ್ಧ ಸಮಾಜದ ಬೆಳವಣಿಗೆಗೆ ದಾರಿದೀಪವಾಗುತ್ತಿದೆ. ಈ ಮಧ್ಯೆ ನಮ್ಮ ರಾಜ್ಯದಲ್ಲಿ ಮುಂದಿನ ಆಡಳಿತ ಚುಕ್ಕಾಣಿ ಹಿಡಿಯುವವರನ್ನು ನಿರ್ಧರಿಸುವ ಚುನಾವಣೆ ಬಂದಿದೆ. ಹಿಂದೂ ಬಂಧುಗಳು ವಿವೇಚನೆಯಿಂದ ಮತ ಚಲಾಯಿಸಬೇಕು.

ಮಾಣಿಲ ಶ್ರೀ ಮಹಾಲಕ್ಷ್ಮಿ ಕ್ಷೇತ್ರದ ಶ್ರೀ ಮೋಹನದಾಸ ಸ್ವಾಮೀಜಿ ಪತ್ರಿಕಾ ಹೇಳಿಕೆ ನೀಡಿ, ಹಿಂದೂ ಮತ್ತು ಹಿಂದೂ ಸಮಾಜದ ಧಾರ್ಮಿಕ ಹಾಗೂ ಸಾಂಸ್ಕೃತಿಕ ನಂಬಿಕೆಗಳನ್ನು ಘಾಸಿಗೊಳಿಸುವ ಪ್ರಯತ್ನದ ಮಧ್ಯೆ ಇಡೀ ಸಮಾಜವನ್ನು ಒಡೆದು ಆಳುವ ನೀತಿಯನ್ನು ಕಾಣುತ್ತಿದ್ದೇವೆ. ಹೀಗಾಗಿ ಮೇ 10 ರಂದು ನಡೆಯುವ ಚುನಾವಣೆಯಲ್ಲಿ ಸಮಸ್ತ ಹಿಂದೂ ಬಂಧುಗಳು ಹಿಂದೂ ಸಮಾಜದ ಪುನರ್‌ ಉನ್ನತಿಗಾಗಿ, ಧರ್ಮ ಉತ್ಥಾನಕ್ಕಾಗಿ, ಧರ್ಮ ಮತ್ತು ರಾಷ್ಟ್ರದ ಪುನರ್‌ ನಿರ್ಮಾಣಕ್ಕಾಗಿ ಏಕತೆಯಿಂದ ಶ್ರದ್ಧೆಯಿಂದ ಕೆಲಸ ಮಾಡಬೇಕು. ಹಿಂದುತ್ವದ ಜಾಗೃತಿಗಾಗಿ ರಾಜಕೀಯವಾಗಿ ಕೆಲಸ ಮಾಡುತ್ತಿರುವ ಪಕ್ಷವನ್ನು ಬೆಂಬಲಿಸಬೇಕು. ಅದರಲ್ಲಿಯು ಪುತ್ತೂರು ಕ್ಷೇತ್ರದಲ್ಲಿ ಪಕ್ಷ ಆಧಾರಿತ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದ್ದಾರೆ.

Leave a Reply

error: Content is protected !!