ನೆಲ್ಯಾಡಿ: ಸರಕಾರವು ಮಹಿಳೆಯರಿಗೆ ಬಸ್ ಪ್ರಯಾಣಕ್ಕೆ ಉಚಿತ ಅವಕಾಶ ಮಾಡಿಕೊಟ್ಟಿರುವ ಪರಿಣಾಮ ಪ್ರೇಕ್ಷಣೀಯ ಹಾಗೂ ಧಾರ್ಮಿಕ ಸ್ಥಳಗಳು ಸೇರಿದಂತೆ ಒಟ್ಟು ಸರಕಾರಿ ಬಸ್ ಗಳಲ್ಲಿ ಮಿತಿಮೀರಿದ ಪ್ರಯಾಣಿಕರನ್ನು ಹೇರುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ನಾಡಿನ ಪ್ರಸಿದ್ಧ ತೀರ್ಥ ಕ್ಷೇತ್ರ ಧರ್ಮಸ್ಥಳದಿಂದ ಸುಬ್ರಹ್ಮಣ್ಯ, ಬೆಂಗಳೂರು,ಹಾಸನ ಸಹಿತ ನಾಡಿನ ಪ್ರೇಕ್ಷಣೀಯ ಸ್ಥಳಗಳಿಗೆ ತೆರಳಲು ಬಸ್ ಗಳಲ್ಲಿ ತಾಮುಂದು, ನಾ ಮುಂದು ಎಂಬಂತೆ ಜಾತ್ರೆ ವಾತಾವರಣ ನಿರ್ಮಾಣವಾಗುತ್ತಿದೆ.
ಸೋಮವಾರ, ಮಂಗಳವಾರ ಧರ್ಮಸ್ಥಳದಿಂದ ಸುಬ್ರಹ್ಮಣ್ಯ ಪ್ರಯಾಣಿಸುವ ಬಸ್‌ಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮಹಿಳೆಯರು ಸೀಟಿಗಾಗಿ ಪರದಾಡುತ್ತಿರುವುದಲ್ಲದೆ, ಉಚಿತ ಪ್ರಯಾಣದಿಂದ ಬಸ್ ಮಿತಿಗಿಂತ ಅಧಿಕ ಮಂದಿಯನ್ನು ಹೇರುತ್ತಿರುವ ಸನ್ನಿವೇಶ ಉಂಟಾಗಿದೆ. ಸೀಮಿತ ಅವಧಿಗೆ ಬಸ್ ಇರುವುದರಿಂದ ಬಹುತೇಕ ವಾರಾಂತ್ಯಕ್ಕೆ ಹೇಗೂ ಜನಸಂದಣಿ ಹೆಚ್ಚೇ ಇರುವುದು ಸಾಮಾನ್ಯ. ಆದರೆ ಉಚಿತ ಪ್ರಯಾಣದ ಅವಕಾಶದಿಂದ ಇನ್ನಷ್ಟು ಹೊರೆ ಹೆಚ್ಚಾಗಿದೆ.
ಗ್ರಾಮೀಣ ಭಾಗಗಳಲ್ಲಿ ಒಂದು ಅಥವಾ ಎರಡು ಬಸ್ ಗಳು ಮಾತ್ರ ಇದ್ದು ಶಾಲಾ, ಕಾಲೇಜು ಹೋಗುವ ಸಮಯದಲ್ಲಿ ಬಸ್ ಬಹುತೇಕ ರಶ್ ಇರುತ್ತದೆ. ಇದೀಗ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಶಾಲಾ, ಕಾಲೇಜು ತಲುಪಲು ಸಾಧ್ಯವಾಗುತ್ತಿಲ್ಲ. ಈಗಿರುವ ಬಸ್ ವ್ಯವಸ್ಥೆಯಿಂದ ಹೆಚ್ಚುವರಿ ಬಸ್ ಸೌಕರ್ಯದ ಅನಿವಾರ್ಯತೆ ಉಂಟಾಗಿದೆ. ಇದರಿಂದ ಚಾಲಕ, ನಿರ್ವಾಹಕರಿಗೂ ಇದನ್ನು ನಿಭಾಯಿಸುವುದು ಸವಾಲಾಗಿ ಪರಿಣಮಿಸಿದೆ. ಹೆಚ್ಚಿನ ಕಡೆಗಳಲ್ಲಿ ಬಸ್‌ನ ಬಾಗಿಲಲ್ಲಿ ನೇತಾಡುವ ಪರಿಸ್ಥಿತಿ ಕಂಡುಬಂದಿದೆ.
ಉಚಿತ ಬಸ್ ಪ್ರಯಾಣದಿಂದ ಧಾರ್ಮಿಕ ಕ್ಷೇತ್ರದಲ್ಲೂ ಭಕ್ತರ ಸಂಖ್ಯೆ ಎಂದಿಗಿಂತ ಏರಿಕೆಯಾಗಿರುವುದು ಕಂಡುಬಂದಿದೆ.
ಶಾಲಾ ಮಕ್ಕಳ ಪರದಾಟ:
ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಸಿಕ್ಕಿರುವುದರಿಂದ ಹೆಚ್ಚಿನ ಬಸ್ಸುಗಳಲ್ಲಿ ಭಾರಿ ಸಂಖ್ಯೆಯ ಪ್ರಯಾಣಿಕರು ಕಂಡುಬರುತ್ತಿದ್ದಾರೆ.
ಇದು ಶಾಲಾ ಟ್ರಿಪ್ ಗಳಿಗೆ ಹೋಗುವ ರೂಟ್ ಗಳಲ್ಲು ಹೊರತಾಗಿಲ್ಲ. ಈ ಬಸ್ ಗಳಲ್ಲು ಹೆಚ್ಚಿನ ಮಹಿಳಾ ಪ್ರಯಾಣಿಕರು ಕಂಡುಬರುವುದರಿಂದ ಬಸ್ ಪಾಸ್ ಇರುವ ವಿದ್ಯಾರ್ಥಿಗಳು ಪರದಾಟ ನಡೆಸುವುದು ಅನಿವಾರ್ಯವಾಗಿದೆ. ಹಾಗೂ ಕೆಲವೊಂದು ರೂಟ್ ಗಳಿಗೆ ಶಾಲಾ ಸಮಯ ಹೆಚ್ಚುವರಿ ಬಸ್ ಒದಗಿಸಬೇಕೆಂಬ ಕೂಗು ಕೇಳಿ ಬರುತ್ತಿದೆ.