ಕಡಬ ತಾಲೂಕು ಇಚ್ಲಂಪಾಡಿ ಗ್ರಾಮದ ಸರಕಾರಿ ಉ.ಹಿ. ಪ್ರಾ. ಶಾಲೆ ನೇರ್ಲದಲ್ಲಿ ಶಾಲಾ ಮಂತ್ರಿಮಂಡಲವನ್ನು ಮತದಾನದ ಮೂಲಕ ರಚಿಸಲಾಯಿತು. ಚುನಾವಣೆಯಲ್ಲಿ ಮುಖ್ಯಮಂತ್ರಿಯಾಗಿ ಸಾನ್ವಿ ಎಸ್.ಎಂ ಹಾಗೂ ಉಪಮುಖ್ಯಮಂತ್ರಿಯಾಗಿ ಶ್ರೇಯಸ್ ಎ.ಬಿ ಆಯ್ಕೆಯಾಗಿದ್ದಾರೆ.
ಗೃಹ ಮಂತ್ರಿಯಾಗಿ ಧನುಷಾ, ಡಾಲ್ವಿ ಸಹಾಯಕ ಮಂತ್ರಿಗಳಾಗಿ ನೀರಜ್, ಗೌತಮ್ ಪೂಜಾರಿ, ಶಿಕ್ಷಣ ಮಂತ್ರಿಗಳಾಗಿ ಕಾವ್ಯಶ್ರೀ, ಪೂರ್ವಿ, ಯೋಗಿತಾ, ಭವಿಷ್ ಆರೋಗ್ಯ ಮಂತ್ರಿಗಳಾಗಿ ಯಶ್ಮಿತ, ಶ್ರಾವ್ಯ ಕೆ. ಎಸ್, ಸಾಂಸ್ಕೃತಿಕ ಮಂತ್ರಿಗಳಾಗಿ ಸಿಂಚನ, ಪ್ರೇಮಲತ ವಾರ್ತಾ ಮಂತ್ರಿಗಳಾಗಿ ನಿಶಾ, ಶುಚಿತ್ವ ಮತ್ತು ಶಿಸ್ತುಮಂತ್ರಿಗಳಾಗಿ ಜಿತೇಶ್, ಪ್ರದ್ಯುಮ್, ವಿಷ್ಣುಪ್ರಸಾದ್, ಆಲನ್ ನೀರಾವರಿ ಮಂತ್ರಿಗಳಾಗಿ ಪ್ರೀತಮ್, ಪೂರ್ಣೇಶ್,ಪ್ರೀತಮ್ ಕೃಷಿ ಮಂತ್ರಿಗಳಾಗಿ ಅಗಸ್ಟಿನ್, ಭವಿತ್, ಪ್ರಿಯೋನಾ, ಹಿತಾ ಕ್ರೀಡಾ ಮಂತ್ರಿಗಳಾಗಿ ರಂಜನ್,ಲಿಖಿತ್ ಗ್ರಂಥಾಲಯ ಮಂತ್ರಿಗಳಾಗಿ ಅನ್ವಿತ, ಪ್ರೇಮಲತ, ರೋಶಿನಿ ಆಯ್ಕೆಯಾಗಿರುತ್ತಾರೆ. ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಜಯಶ್ರೀ. ಎಸ್ ಇವರ ಮಾರ್ಗದರ್ಶನದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ನಡೆಸಲಾಯಿತು.
ಶಾಲೆಯ ಕಿರು ಪರಿಚಯ
1957ರಲ್ಲಿ ಆರಂಭವಾದ ನೇರ್ಲ ಶಾಲೆ ಯು ಸುಮಾರು 76 ವರ್ಷಗಳ ಸುದೀರ್ಘ ಇತಿಹಾಸವನ್ನು ಹೊಂದಿದೆ. ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟಕ್ಕೆ ವಿದ್ಯಾರ್ಥಿಗಳನ್ನು ಬೆಳೆಸಿರುವ ಈ ಶಾಲೆಯು ಪ್ರಸ್ತುತ ಆರು ಮಂದಿ ನುರಿತ ಅನುಭವಿ ಶಿಕ್ಷಕರನ್ನು ಹೊಂದಿದ್ದು ಉನ್ನತ ವ್ಯಾಸಂಗ(Ph.d) ಪಡೆದ ಶಿಕ್ಷಕರನ್ನು ಒಳಗೊಂಡಿದೆ. ಪ್ರಸ್ತುತ ನೇರ್ಲ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆದ ಮಕ್ಕಳೇ ಸುತ್ತಮುತ್ತಲಿನ ಪ್ರೌಢಶಾಲೆಗಳಲ್ಲಿ ಪ್ರಥಮ ಮತ್ತು ವಿಶಿಷ್ಟ ಶ್ರೇಣಿಗಳಲ್ಲಿ ಉತ್ತೀರ್ಣರಾಗುತ್ತಿರುವುದು ಗಮನಾರ್ಹ. ಸರಕಾರದ ಪ್ರಾಯೋಜಕತ್ವದಲ್ಲಿ ನಡೆಯುವ NMMS ಪರೀಕ್ಷೆಯನ್ನು ಹಲವಾರು ವರ್ಷಗಳಿಂದ ನೇರ್ಲ ಶಾಲೆಯ ಮಕ್ಕಳು ಬರೆಯುತ್ತಿದ್ದು, ಸತತ ಏಳು ವರ್ಷಗಳಿಂದ ಮಕ್ಕಳು ಈ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗುತ್ತಿದ್ದಾರೆ. ಈ ಯೋಜನೆಯಂತೆ ಎಂಟನೇ ತರಗತಿವರೆಗೆ ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಅರ್ಹ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿ ತನಕ ತಿಂಗಳಿಗೆ ರೂ.2,000/-ಯಂತೆ ವಿದ್ಯಾರ್ಥಿವೇತನವನ್ನು ಸರಕಾರವು ನೀಡುತ್ತದೆ. ಪ್ರಸಕ್ತ 2022-23ರ ಸಾಲಿನಲ್ಲಿ ಪರೀಕ್ಷೆ ಬರೆದ ಎಂಟು ಮಕ್ಕಳಲ್ಲಿ ನಾಲ್ಕು ಮಕ್ಕಳು ಯೋಜನೆಯ ಅರ್ಹತೆಯನ್ನು ಪಡೆದಿರುತ್ತಾರೆ. ಈ ಸಾಧನೆಯಲ್ಲಿ ಶಾಲೆಯು ಪುತ್ತೂರು – ಕಡಬ ತಾಲೂಕಿನಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುವುದು ಮಕ್ಕಳಲ್ಲಿ ಶಿಕ್ಷಣದ ಗುಣಮಟ್ಟವನ್ನು ತಿಳಿಸುತ್ತದೆ. ಶೈಕ್ಷಣಿಕ ವರ್ಷದ ಪ್ರಾರಂಭದ ದಿನದಿಂದಲೂ ಈ ಪರೀಕ್ಷೆಗೆ ಮಕ್ಕಳನ್ನು ವಿಶೇಷ ತರಗತಿಗಳ ಮೂಲಕ ವೈಯಕ್ತಿಕ ಆಸಕ್ತಿಯಿಂದ ತಯಾರು ಮಾಡುವ ಶಿಕ್ಷಕರ ಶ್ರಮ ಅಭೂತಪೂರ್ವ ವಾಗಿದೆ. ಪ್ರತಿ ತಿಂಗಳು ಪೋಷಕರ ಸಭೆ ಕರೆದು ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಪರಿಶೀಲಿಸುವಂತೆ ಮಕ್ಕಳ ಕಲಿಕೆಗೆ ಉತ್ತೇಜನ ನೀಡಲಾಗುತ್ತಿದೆ. ಅಲ್ಲದೇ ಹೆಚ್ಚುವರಿ ಶಿಕ್ಷಕರನ್ನು ನೇಮಿಸಿಕೊಂಡು ಮಕ್ಕಳ ಕಲಿಕೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಅನೇಕ ಚಟುವಟಿಕೆ ಮತ್ತು ಪ್ರಯೋಗಗಳ ಮೂಲಕ ಮಕ್ಕಳಿಗೆ ಪಾಠವನ್ನು ಅರ್ಥೈಸಲಾಗುತ್ತದೆ, ಜೊತೆಗೆ ಕಂಪ್ಯೂಟರ್ ಜ್ಞಾನವನ್ನು ಮಕ್ಕಳಿಗೆ ನೀಡಲಾಗುತ್ತಿದೆ. ಆಸಕ್ತಿ ಉಳ್ಳ ಮಕ್ಕಳಿಗೆ ಗೈಡ್ಸ್ ತರಬೇತಿಯನ್ನು ನೀಡಲಾಗುವುದು. ವಿಶಾಲವಾದ ಆಟದ ಮೈದಾನ ಮತ್ತು ಗ್ರಂಥಾಲಯವನ್ನು ಶಾಲೆಯು ಹೊಂದಿದೆ. ಪ್ರತಿ ವರ್ಷವೂ ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ ಮತ್ತು ಶೂ ಗಳನ್ನು ವಿತರಿಸಲಾಗುತ್ತಿದೆ. ಮಕ್ಕಳಿಗೆ ಶುದ್ಧೀಕರಿಸಿದ ನೀರಿನ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಮಕ್ಕಳಿಗೂ ಕ್ಷೀರಭಾಗ್ಯ, ಮಧ್ಯಾಹ್ನದ ಬಿಸಿ ಊಟದ ವ್ಯವಸ್ಥೆ ಇದ್ದು, ಶುಚಿ ರುಚಿಯಾದ ಪೌಷ್ಟಿಕ ಆಹಾರವನ್ನು ನೀಡಲಾಗುತ್ತಿದೆ. ಕಲಿಕೆಯ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿಯೂ ಮಕ್ಕಳು ಬೆಳೆಯುತ್ತಿರುವುದು ಗಮನಿಸಬೇಕಾದ ವಿಷಯವಾಗಿದೆ. ಪ್ರತಿ ವರ್ಷವೂ ಪ್ರತಿಭಾ ಕಾರಂಜಿಯಲ್ಲಿ ಮಕ್ಕಳು ಶಾಲೆಯನ್ನು ಪ್ರತಿನಿಧಿಸುತ್ತಿದ್ದಾರೆ. ಈ ವರ್ಷವೂ ಕೂಡ ಸಮಗ್ರ ಪ್ರಶಸ್ತಿ ಯನ್ನು ಪಡೆದಿರುವುದು ಹೆಮ್ಮೆಯ ವಿಷಯಯಾಗಿದೆ. ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳಿಂದ ಮಕ್ಕಳ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಕ್ರೀಡಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ ಮಕ್ಕಳಿಗೆ ಅನುಭವಿ ಆಟಗಾರರಿಂದ ತರಬೇತಿಯನ್ನು ಕೊಡಿಸಲಾಗುತ್ತಿದೆ. ಪ್ರತಿ ವರ್ಷವೂ ತಾಲೂಕು ಮತ್ತು ಜಿಲ್ಲಾಮಟ್ಟಕ್ಕೆ ಮಕ್ಕಳು ಶಾಲೆಯಿಂದ ಆಯ್ಕೆ ಗೊಳ್ಳುತ್ತಿದ್ದಾರೆ. ಆಯ್ಕೆಗೊಂಡ ಮಕ್ಕಳನ್ನು ಕ್ರೀಡಾ ಸ್ಥಳಕ್ಕೆ ಶಿಕ್ಷಕರೇ ಜವಾಬ್ದಾರಿ ಮತ್ತು ಮುತುವರ್ಜಿಯಿಂದ ಕರೆದುಕೊಂಡು ಹೋಗಿ ಪ್ರೋತ್ಸಾಹಿಸುತ್ತಾರೆ. ಪ್ರಸಕ್ತ ವರ್ಷದಲ್ಲಿ ಚೆಸ್ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಮಕ್ಕಳು ಭಾಗವಹಿಸಿರುವುದು ಅಭಿನಂದಾನರ್ಹ. ಈ ರೀತಿಯಾಗಿ ಶಾಲೆಯು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಹಾಗೆಯೇ ನೇರ್ಲ ಶಾಲೆಯು ತಾಲೂಕಿನಲ್ಲಿಯೇ ಅತ್ಯುತ್ತಮ ಶಾಲೆಗಳಲ್ಲಿ ಒಂದೆಂದು ಗುರುತಿಸಿಕೊಂಡಿದೆ.