ಭಾರತೀಯ ಸಂಸ್ಕಾರದ ಮೂಲ ವ್ಯವಸ್ಥೆಯನ್ನು ಶಿಕ್ಷಣದ ಜೊತೆಗೆ ಅಳವಡಿಸಿಕೊಂಡು ಆಂಗ್ಲ ಮಾಧ್ಯಮ ವಿಭಾಗವನ್ನು ಪ್ರಾರಂಭಿಸಲಾಗುತ್ತಿದೆ: ಡಾ|ಪ್ರಭಾಕರ ಭಟ್

ಶೇರ್ ಮಾಡಿ

ಕಡಬ: ಮಕ್ಕಳಿಗೆ ಶಿಕ್ಷಣ ಜೊತೆಗೆ ಸಂಸ್ಕಾರ ಕೊಟ್ಟು ಬದುಕುವುದು ಹೇಗೆ ಎಂದು ಅವರಿಗೆ ಕಲಿಸಿಕೊಟ್ಟಾಗ ಆ ಮಕ್ಕಳು ಮುಂದೆ ಜೀವನದಲ್ಲಿ ಜಯಗಳಿಸುತ್ತಾರೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ|ಪ್ರಭಾಕರ ಭಟ್ ಹೇಳಿದರು.

ಅವರು ಬುಧವಾರ ಕಡಬದ ಕೇವಳ ಹನುಮಾನ್ ನಗರದಲ್ಲಿರುವ ಸರಸ್ವತೀ ವಿದ್ಯಾಲಯದಲ್ಲಿ ಪ್ರಾರಂಭವಾದ ಆಂಗ್ಲ ಮಾಧ್ಯಮ ವಿಭಾಗದ ತರಗತಿಗಳ ಉದ್ಘಾಟನೆ ಹಾಗೂ ಶಾಲಾ ಪ್ರಾರಂಭೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಾರತೀಯತೆ ಮತ್ತು ಭಾರತೀಯ ಸಂಸ್ಕಾರದ ಮೂಲ ವ್ಯವಸ್ಥೆಯನ್ನು ಶಿಕ್ಷಣದ ಜೊತೆಗೆ ಅಳವಡಿಸಿಕೊಂಡು ಆಂಗ್ಲ ಮಾಧ್ಯಮ ವಿಭಾಗವನ್ನು ಪ್ರಾರಂಭಿಸಲಾಗುತ್ತಿದೆ. ನಮ್ಮ ದೇಶ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಿದೆ, ಅನಾದಿ ಕಾಲದಿಂದಲೂ ಭಾರತ ವಿಶ್ವಕ್ಕೆ ಮಾದರಿಯಾಗಿರುವ ದೇಶ. ಈ ನಮ್ಮ ಹಿರಿಮೆಯನ್ನು ನಮ್ಮ ಮಕ್ಕಳಿಗೆ ತಿಳಿಹೇಳುವ ಕೆಲಸ ಆಗಬೇಕು ಹೊರತು ಆಂಗ್ಲರ ಮೆಖಾಲೆ ಶಿಕ್ಷಣ ಪದ್ದತಿಯನ್ನಲ್ಲ ಎಂದು ಪ್ರಭಾರಕರ ಭಟ್ ಹೇಳಿದರು.

ಆಂಗ್ಲ ಮಾಧ್ಯಮ ತರಗತಿಗಳನ್ನು ಉದ್ಘಾಟಿಸಿದ ಮಂಗಳೂರಿನ ಸಾಮಾಜಿಕ ಕಾರ್ಯಕರ್ತ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ವ್ಯಕ್ತಿತ್ವ ನಿರ್ಮಾಣ ಮಾಡುವುದರೊಂದಿಗೆ ರಾಷ್ಟನಿರ್ಮಾಣಕ್ಕೆ ಪ್ರೇರಣೆ ನೀಡುವ ಶಿಕ್ಷಣವನ್ನು ನೀಡಿದಾಗ ಸದೃಢ ಭಾರತ ನಿರ್ಮಾಣದ ಕನಸು ಸಾಕಾರಗೊಳ್ಳುತ್ತದೆ. ಮಕ್ಕಳ ಶಿಕ್ಷಣ ಸಿಲೆಬಸ್ ಮುಖಾಂತರ ಆಗುತ್ತದೆ ಎನ್ನುವ ಭ್ರಮೆ ನಮ್ಮಲ್ಲಿದೆ ನಮ್ಮ ನಡವಳಿಕೆಯನ್ನು ಅರಿತು ಶಿಕ್ಷಣ ಪಡೆಯುತ್ತಾರೆ ಎಂದು ತಿಳಿದುಕೊಂಡರೆ ಮಕ್ಕಳ ವ್ಯಕ್ತಿತ್ವವನ್ನು ರೂಪಿಸಲು ಸಾಧ್ಯವಾಗುತ್ತದೆ. ಮಕ್ಕಳ ಶೈಕ್ಷಣಿಕ ಅಭ್ಯುದಯದಲ್ಲಿ ಪೋಷಕರು ಹಾಗೂ ಶಿಕ್ಷಕರ ಪಾತ್ರ ಹಿರಿದು ಎನ್ನುವುದನ್ನು ಅರಿತು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಿ ರಾಷ್ಟದ ಆಸ್ತಿಯನ್ನಾಗಿ ಮಾಡಬೇಕಾಗಿದೆ ಎಂದರು.

ಸರಸ್ವತೀ ವಿದ್ಯಾಲಯದ ಸಂಚಾಲಕ ವೆಂಕಟ್ರಮಣ ರಾವ್ ಮಂಕುಡೆ ಮಾತನಾಡಿ ಈ ಭಾಗದ ವಿದ್ಯಾಭಿಮಾನಿಗಳ ಆಶಯದಂತೆ ನಾವು ಇಲ್ಲಿ ಆಂಗ್ಲ ಮಾಧ್ಯಮ ತರಗತಿಯನ್ನು ಪ್ರಾರಂಭಿಸಿದ್ದೇವೆ, ಈಗ ಆರು, ಏಳು ಹಾಗೂ ಎಂಟನೇ ತರಗತಿಯ ಆಂಗ್ಲ ಮಾಧ್ಯಮ ತರಗತಿಗಳನ್ನು ಪ್ರಾರಂಭಿಸಿದ್ದೇವೆ ಮುಂದೆ ರಾಷ್ಟಿಯ ಶಿಕ್ಷಣ ನೀತಿಯನ್ವಯ ಹೈಸ್ಕೂಲು ವಿಭಾಗ ಮತ್ತು ಪಿಯುಸಿಯನ್ನು ಮುಂದುವರಿಸಲಾಗುವುದು ಎಂದರು.

ಸoಸ್ಥೆಯ ಅಧ್ಯಕ್ಷ ರವಿರಾಜ್ ಶೆಟ್ಟಿ ಮಾತನಾಡಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೆಶಕ ಕೃಷ್ಣ ಶೆಟ್ಟಿ ಕಡಬ, ಬೆಟ್ಟಂಪಾಡಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ಮುಖ್ಯಶಿಕ್ಷಕ ರಾಜೇಶ್ ಎನ್ ಅತಿಥಿಗಳಾಗಿ ಭಾಗವಹಿಸಿದ್ದರು. ಸರಸ್ವತೀ ವಿದ್ಯಾಲಯದ ಪ್ರೌಢ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಶೈಲಶ್ರೀ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳನ್ನು ಡಾ|ಪ್ರಭಾಕರ ಭಟ್ ತಿಲಕವಿಟ್ಟು ಸ್ವಾಗತಿಸಿದರು. ವಿದ್ಯಾರ್ಥಿಗಳು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಹೋಮಕುಂಡಕ್ಕೆ ಹವಿಸ್ಸು ಸಮರ್ಪಿಸಿ ತಂದೆ ತಾಯಿಯ ಆಶೀರ್ವಾದ ಪಡೆದು ಶಾಲಾ ಪ್ರಾರಂಭೋತ್ಸವಕ್ಕೆ ಸಂಸ್ಕಾರದ ಮೆರಗು ನೀಡಿದರು.
ವೆಂಕಟ್ರಮಣ ರಾವ್ ಮಂಕುಡೆ ಸ್ವಾಗತಿಸಿದರು. ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಭವ್ಯಶ್ರೀ ಕೆ ವಂದಿಸಿದರು. ವಿದ್ಯಾರ್ಥಿನಿ ಪೂರ್ವಿ ಎಸ್ ರೈ ಕಾರ್ಯಕ್ರಮ ನಿರೂಪಿಸಿದರು.

Leave a Reply

error: Content is protected !!