ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಔಷಧೀಯ ಸಸಿಗಳನ್ನು ನೆಡುವ ಕಾರ್ಯಕ್ರಮ

ಶೇರ್ ಮಾಡಿ

ಪಟ್ಪೂರು: ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ವಿವೇಕ ಸಂಜೀವಿನಿ ಕಾರ್ಯಕ್ರಮದ ಅಡಿಯಲ್ಲಿ ಔಷಧೀಯ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಜೂನ್ 26ರಂದು ನಡೆಸಲಾಯಿತು.

ವಿದ್ಯಾಸಂಸ್ಥೆಯ ಕಾರ್ಯದರ್ಶಿ ಪ್ರಶಾಂತ ಶೆಟ್ಟಿ ದೇರಾಜೆ ಔಷಧೀಯ ಸಸಿಯನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ವಿಲುಪ್ತವಾಗುತ್ತಿರುವ ಔಷಧೀಯ ಸಸ್ಯಗಳನ್ನು ನೆಟ್ಟು ಬೆಳೆಸಿ, ಮುಂದಿನ ಪೀಳಿಗೆಗೆ ನೀಡಬೇಕಾಗಿರುವುದು ಇಂದಿನ ಅತೀ ಅಗತ್ಯಗಳಲ್ಲಿ ಒಂದು. ಇದು ಜನರ ಆರೋಗ್ಯ ಕಾಪಾಡುವ ಹಾಗೂ ರೋಗಗಳ ನಿವಾರಣೆಗೆ ಚಿಕಿತ್ಸೆ ನೀಡಲು ನೆರವಾಗುತ್ತದೆ. ಇದರ ಕುರಿತು ಜಾಗೃತಿ ಮೂಡಿಸಬೇಕಾಗಿದೆ. ನಮ್ಮ ಪರಂಪರಾಗತ ಚಿಕಿತ್ಸಾ ಪದ್ಧತಿಗಳನ್ನು ಜೀವಂತ ಇಡಲು ಇದು ನೆರವಾಗುತ್ತವೆ ಎಂದರು.

ಶಾಲೆಯಲ್ಲಿ ಮೂಲಿಕಾವನ ನಿರ್ಮಿಸುವ ಯೋಜನೆ ಇದ್ದು, ಈಗಾಗಲೇ ಪ್ರಾಥಮಿಕ ಹಂತದ ರೂಪರೇಷೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ಶಾಲಾ ಮುಖ್ಯೋಪಾಧ್ಯಾಯ ಚಂದ್ರಶೇಖರ ಶೇಟ್ ತಿಳಿಸಿದರು. ಈ ನಿಟ್ಟಿನಲ್ಲಿ ಶಾಲಾ ವಿದ್ಯಾರ್ಥಿಗಳೇ ಔಷಧೀಯ ಸಸಿಗಳನ್ನು ನೆಟ್ಟು ಸಂರಕ್ಷಿಸುವ ಕಾರ್ಯವನ್ನು ನಮ್ಮ ಶಾಲೆಯಲ್ಲಿಯೇ ನಡೆಸಲಿದ್ದಾರೆ. ಇದರಿಂದ ಸಹಜವಾಗಿಯೇ ವಿದ್ಯಾರ್ಥಿಗಳಿಗೆ ಔಷಧೀಯ ಸಸ್ಯಗಳ ಪರಿಚಯವಾದಂತಾಗುತ್ತದೆ. ವಿದ್ಯಾರ್ಥಿಗಳಿಗೆ ಯೋಜನಾಕಾರ್ಯದ ಭಾಗವಾಗಿ ಔಷಧೀಯ ಸಸಿಗಳನ್ನೇ ನೀಡಲಾಗುತ್ತದೆ. ಇದಕ್ಕಾಗಿ ನಮ್ಮ ಶಾಲಾ ಶಿಕ್ಷಕರೇ ಮಾರ್ಗದರ್ಶಕರಾಗಿರುತ್ತಾರೆ ಎಂದರು.

1ನೇ ತರಗತಿಯಿಂದ 10ನೇ ತರಗತಿವರೆಗಿನ ಎಲ್ಲಾ ವಿದ್ಯಾರ್ಥಿಗಳು ಉತ್ಸಾಹದಿಂದ ಸಸಿ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಶಿಕ್ಷಕರು, ಶಾಲಾ ಸಿಬ್ಬಂದಿಗಳು ಸಹಕರಿಸಿದರು.

Leave a Reply

error: Content is protected !!