ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಪಾಂಗಳದ ಸೌಜನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರು ಹಾಗೂ ಅವರ ಕುಟುಂಬಸ್ಥರ ವಿರುದ್ಧ ಮಾಡುತ್ತಿರುವ ಆರೋಪಗಳ ಕುರಿತು ನ್ಯಾಯಾಲಯವು ನಿರ್ಬಂಧಕಾಜ್ಞೆ ಆದೇಶ ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿ ಡಾ|ಹೆಗ್ಗಡೆ ಹಾಗೂ ಅವರ ಕುಟುಂಬಸ್ಥರ ವಿರುದ್ಧ ಮಹೇಶ್ ಶೆಟ್ಟಿ ತಿಮರೋಡಿ, ಜಗದೀಶ್, ಪ್ರಭಾ ಬೆಳಹೊಂಗಳ, ಸೋಮನಾಥ್ ನಾಯಕ್, ಬಿ.ಎಂ. ಭಟ್, ವಿಠಲ್ ಗೌಡ ಮತ್ತುಇತರರು ಇಲ್ಲಸಲ್ಲದ ಆರೋಪ ಮಾಡಿ ತೇಜೋವಧೆ ಮಾಡುತ್ತಿದ್ದ ವಿಚಾರಕ್ಕೆ ಸಂಬಂಧಪಟ್ಟಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
ನ್ಯಾಯಾಲಯವು ಧರ್ಮಸ್ಥಳದ ದೇವಸ್ಥಾನ ಮತ್ತು ಧರ್ಮಾಧಿಕಾರಿ ಡಾ|ಹೆಗ್ಗಡೆಯವರು ನಡೆಸುತ್ತಿರುವಂತಹ ಸಂಸ್ಥೆಗಳು ಹಾಗೂ ಅವರ ಕುಟುಂಬಸ್ಥರ ವಿರುದ್ಧ ಈ 6 ಜನ ವ್ಯಕ್ತಿಗಳು ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಮಾತನಾಡದಂತೆ ನಿರ್ಬಂಧಕಾಜ್ಞೆ ನೀಡಿರುತ್ತದೆ.
ಮಾತ್ರವಲ್ಲದೇ ಈಗಾಗಲೇ ಪ್ರಸಾರವಾಗಿರುವ ಅಥವಾ ಹಂಚಿಕೊಂಡಿರುವ ಅವಹೇಳನಕಾರಿ ವಿಚಾರಗಳನ್ನು ಅಳಿಸಿ ಹಾಕುವಂತೆ ಆದೇಶ ಮಾಡಲಾಗಿರುತ್ತದೆ. ವಾದಿಗಳ ಪರವಾಗಿ ನ್ಯಾಯವಾದಿಗಳಾದ ಪುತ್ತೂರು ಮೂಲದ ರಾಜಶೇಖರ ಹಿಲ್ಯಾರು ಮತ್ತು ಮಂಗಳೂರಿನ ಮಯೂರ ಕೀರ್ತಿ ವಾದಿಸಿದ್ದರು ಎಂದು ಎಸ್‌ಕೆಡಿಆರ್‌ಡಿಪಿಯ ಕಾರ್ಯನಿರ್ವಾಹಕ ನಿರ್ದೇಶಕರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.