ಉಡುಪಿ : ಉಡುಪಿಯ ಖಾಸಗಿ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿಯ ವಿಡಿಯೋ ಪ್ರಕರಣ ಭಾರೀ ಸದ್ದು ಮಾಡುತ್ತಿದೆ. ಇದರ ನಡುವೆಯೇ ಉಡುಪಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಭೇಟಿ ನೀಡುತ್ತಿದ್ದಾರೆ. ಈ ಹಿನ್ನೆಲೆ ಬಿಜೆಪಿ ಸಿದ್ದರಾಮಯ್ಯ ಅವರಿಗೆ ಒಂದಿಷ್ಟು ಪ್ರಶ್ನೆಗಳನ್ನು ಕೇಳಿದ್ದು, ಉತ್ತರಿಸುತ್ತೀರಾ ಎಂದು ಕೇಳಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, ಪೊಡವಿಗೊಡೆಯ ಶ್ರೀ ಕೃಷ್ಣನ ಸನ್ನಿಧಾನವಾಗಿರುವ ಉಡುಪಿಗೆ ಭೇಟಿ ನೀಡುವ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸುತ್ತಾರಾ? ಎಂದು 7 ಪ್ರಶ್ನೆಗಳನ್ನು ಕೇಳಿದೆ.
- ಉಡುಪಿ ಕಾಲೇಜಿನ ಘಟನೆಯನ್ನು ಸಿದ್ದರಾಮಯ್ಯ ಸರ್ಕಾರ ತಿರುಚಲು ಪ್ರಯತ್ನಿಸಿದ್ದು ಏಕೆ?
- ಉಡುಪಿಯ ಕಾಲೇಜಿನ ಪ್ರಕರಣದ ಸಾಕ್ಷಿಯನ್ನು ನಾಶಗೊಳಿಸಲು ಪೊಲೀಸರ ಮೇಲೆ ಒತ್ತಡ ತಂದದ್ದು ಸರಿಯೇ?
- ರಾತ್ರೋರಾತ್ರಿ ಸಾಮಾಜಿಕ ಕಾರ್ಯಕರ್ತೆಯ ಮನೆಗೆ ಪೊಲೀಸರನ್ನು ನುಗ್ಗಿಸಿದ್ದು ಏಕೆ?
- ಉಡುಪಿ ಘಟನೆಯ ತಪ್ಪಿತಸ್ಥರು ಹಾಗೂ ಅವರ ಪ್ರೇರಕ ಶಕ್ತಿಗಳ ಗಡಿಪಾರು ಯಾವಾಗ?
- ಉಡುಪಿ ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ವಹಿಸದಿರಲು ಪ್ರಮುಖ ಕಾರಣವೇನು?
- ಖುದ್ದು ಸಂಪೂರ್ಣ ಸರ್ಕಾರವೇ ಭಾಗಿಯಾಗಿ ಈ ಪ್ರಕರಣದ ದಿಕ್ಕನ್ನು ತಪ್ಪಿಸುತ್ತಿರುವುದು ಯಾರನ್ನು ರಕ್ಷಿಸುವುದಕ್ಕಾಗಿ?
- ಜಿಹಾದಿ ಮತ್ತು ನಿಷೇಧಿತ ಸಂಘಟನೆಗಳನ್ನು ಪೋಷಿಸುತ್ತಿರುವುದು ಅವರ ಮೇಲಿನ ಭಯದ ಕಾರಣಕ್ಕೋ ಅಥವಾ ಅವರ ಮೇಲಿನ ವಾತ್ಸಲ್ಯಕ್ಕೋ? ಎಂದು ಬಿಜೆಪಿ ಪ್ರಶ್ನಿಸಿದೆ.
ಏನಿದು ಉಡುಪಿ ವಿಡಿಯೋ ಪ್ರಕರಣ?
ಉಡುಪಿಯ ಖಾಸಗಿ ಪ್ಯಾರಾ ಮೆಡಿಕಲ್ ಕಾಲೇಜಿನ ವಾಶ್‌ರೂಂನಲ್ಲಿ ವಿದ್ಯಾರ್ಥಿನಿಯ ವಿಡಿಯೋ ಚಿತ್ರೀಕರಣ ಪ್ರಕರಣ ರಾಜ್ಯದ ಗಮನ ಸೆಳೆದಿದೆ. ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಹಿಂದೂ ವಿದ್ಯಾರ್ಥಿನಿಯ ವಿಡಿಯೋವನ್ನು ವಾಶ್‌ರೂಂನಲ್ಲಿ ಚಿತ್ರೀಕರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಘಟನೆ ಬೆಳಕಿಗೆ ಬಂದ ತಕ್ಷಣ ಕಾಲೇಜು ಆಡಳಿತ ಮಂಡಳಿ ಮೂವರು ವಿದ್ಯಾರ್ಥಿನಿಯರನ್ನು ಅಮಾನತು ಮಾಡಿದೆ. ಪ್ರಕರಣ ನಡೆದು 8 ದಿನಗಳ ಬಳಿಕ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಪ್ರಕರಣವನ್ನು ಮುಚ್ಚಿ ಹಾಕುವ ಕೆಲಸ ಮಾಡಲಾಗುತ್ತಿದೆ ಎಂದು ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಈಗಾಗಲೇ ತನಿಖಾಧಿಕಾರಿಯನ್ನು ಕೂಡ ಸರ್ಕಾರ ಬದಲಾಯಿಸಿದೆ. ರಾಷ್ಟ್ರೀಯ ಮಹಿಳಾ ಆಯೋಗ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ಮಹಿಳಾ ಆಯೋಗದ ಸದಸ್ಯೆ ಖುಷ್ಬು ಸುಂದರ್ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಕ್ಯಾಮೆರಾ ಇರುವುದು ಪತ್ತೆಯಾಗಿಲ್ಲ ಎಂದು ಕೂಡ ಹೇಳಿದ್ದಾರೆ.
ಎಸ್‌ಐಟಿ ತನಿಖೆಯ ಪ್ರಶ್ನೆಯೇ ಇಲ್ಲ ಎಂದ ಸಿಎಂ
ಉಡುಪಿ ಕಾಲೇಜಿನ ಮೊಬೈಲ್ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸುಮೋಟೋ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಈಗಾಗಲೇ ಎಫ್‌ಐಆರ್ ಆಗಿದೆ. ತನಿಖೆಯನ್ನು ಡಿವೈಎಸ್ಪಿ ಮಟ್ಟದ ಅಧಿಕಾರಿ ಮಾಡುತ್ತಿದ್ದು, ಪ್ರಕರಣವನ್ನು ಎಸ್‌ಐಟಿಗೆ ವಹಿಸುವ ಪ್ರಶ್ನೆ ಉದ್ಬವವಾಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಅದಲ್ಲದೇ ಇದು ಮಕ್ಕಳಾಟ ಆಗಿದ್ದರೆ ಪ್ರಕರಣ ದಾಖಲಾಗುತ್ತಿದ್ದಿಲ್ಲ ಎಂದು ತಿಳಿಸಿದ್ದಾರೆ.