ಪಟ್ರಮೆ: ಮಕ್ಕಳ ಭವಿಷ್ಯಕ್ಕಾಗಿ ಹೋರಾಟವೇ? ಅಥವಾ ಪ್ರತಿಷ್ಠೆಗೋಸ್ಕರವೇ ಈ ಹೋರಾಟ..!!

ಶೇರ್ ಮಾಡಿ

ಪಟ್ರಮೆ: ಶಾಲೆಗೆ ಅಗತ್ಯ ಶಿಕ್ಷಕರನ್ನು ಒದಗಿಸಿ ಎಂದು ಈ ವರ್ಷದ ಶೈಕ್ಷಣಿಕ ವರ್ಷಾರಂಭದಿಂದಲೇ ವಿನಂತಿ, ಮನವಿ ಎಲ್ಲಾ ಮಾಡಿರುವ ಹೊರತಾಗಿಯೂ ಇನ್ನೂ ಶಿಕ್ಷಕರನ್ನು ಒದಗಿಸದೇ ಇರುವುದರಿಂದ ನೊಂದ ಶಾಲಾ ಪೋಷಕರು ಇಲಾಖೆಯನ್ನು ಒತ್ತಾಯಿಸುವ ಸಲುವಾಗಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿಕೊಡದೆ ಪ್ರತಿಭಟಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಪಟ್ರಮೆ ಎ (ಅನಾರು) ಶಾಲೆಯಲ್ಲಿ ಆಗಸ್ಟ್ 15 ರಂದು ನಡೆದಿದೆ.
ಸ್ವಾತಂತ್ರ‍್ಯ ದಿನಾಚರಣೆಯ ಸಂಭ್ರಮದಲ್ಲಿ ನಲಿದಾಡಬೇಕಿದ್ದ ಪುಟಾಣಿಗಳು ಶಾಲೆಗೆ ಬರದೆ ಸಂಭ್ರಮದಿಂದ ವಂಚಿತರಾಗಿ ಮನೆಯಲ್ಲಿಯೇ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲೆಗೆ ಕಳುಹಿಸಲು ಪೋಷಕರಲ್ಲಿ ಮಕ್ಕಳ ಸುರಕ್ಷತೆಯ ಬಗ್ಗೆ ನೋಡಿಕೊಳ್ಳುವವರು ಯಾರು ಎಂಬ ಆತಂಕ ಎದುರಾಗಿದೆ.

ಏನಿದು ಘಟನೆ
ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಪಟ್ರಮೆ “ಎ” ಶಾಲೆಯಲ್ಲಿ 73 ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಮಾಡುತ್ತಿದ್ದು, ಈ ವಿದ್ಯಾರ್ಥಿಗಳಿಗೆ ಭೋದಿಸಲು ನಾಲ್ಕು ಶಿಕ್ಷಕರು ಕರ್ತವ್ಯದಲ್ಲಿ ಇರಬೇಕಾಗಿತ್ತು. ಆದರೆ ಈಗ ಇಬ್ಬರು ಸರಕಾರಿ ಶಿಕ್ಷಕರು ಹಾಗೂ ಓರ್ವ ಅತಿಥಿ ಶಿಕ್ಷಕಿ, ಮತ್ತು ಓರ್ವ ಗೌರವ ಶಿಕ್ಷಕಿ ಪಾಠ ಮಾಡುವ ಪರಿಸ್ಥಿತಿ ಇದೆ. ಅತಿಥಿ ಶಿಕ್ಷಕಿ ತಮಗೆ ಶಾಲೆಗೆ ಬರಲು ಅನಾನುಕೂಲತೆಗಳಿದ್ದು ಶಾಲೆಗೆ ಬರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು ಇನ್ನುಳಿದವರು 8 ತರಗತಿಗಳ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಿಸಲು ಹೇಗೆ ಸಾಧ್ಯ ಅದೂ ಅಲ್ಲದೆ ಮುಖ್ಯ ಶಿಕ್ಷಕರಿಗೆ ಇಲಾಖೆಯ ಸಾಕಷ್ಟು ಕೆಲಸಗಳ ಹೊರೆಯಿದ್ದು ವಿದ್ಯಾರ್ಥಿಗಳಿಗೆ ಬೋಧಿಸಲು ಅವರಿಂದ ಕಷ್ಟ ಸಾಧ್ಯ. ಅದಲ್ಲದೆ ಈ ಶಾಲೆಯಲ್ಲಿ ಒಂದನೇ ತರಗತಿಯಿಂದ ಎಂಟನೇ ತರಗತಿಯವರೆಗಿನ ಮಕ್ಕಳಿದ್ದು ಆ ಮಕ್ಕಳಿಗೆ ಈ ಇಬ್ಬರ ಶಿಕ್ಷಕರು ಪೂರ್ಣಮಟ್ಟದ ಶಿಕ್ಷಣವನ್ನು ಕೊಡಲು ಸಾಧ್ಯವಿಲ್ಲ. ಇಬ್ಬರಲ್ಲಿ ಒಬ್ಬರು ರಜೆ ಹಾಕಿದರು 70 ಮಕ್ಕಳನ್ನ ಒಂದೇ ಶಿಕ್ಷಕಿ ನೋಡಿಕೊಳ್ಳಬೇಕಾಗುತ್ತದೆ. ನಲಿ-ಕಲಿ ಪದ್ದತಿಯಲ್ಲಿ ಬೋಧಿಸಲು ಓರ್ವ ಶಿಕ್ಷಕರು ನಿಯೋಜನೆಗೊಂಡರೆ ಉಳಿದಂತೆ ನಾಲ್ಕನೇ ತರಗತಿಯಿಂದ ಎಂಟನೇ ತರಗತಿವರೆಗೆ ಓರ್ವ ಶಿಕ್ಷಕಿ ಪಾಠ ಮಾಡಬೇಕಾದ ಅನಿವಾರ್ಯತೆ ಇದೆ. ಈ ಎಲ್ಲಾ ಕಾರಣಗಳಿಂದ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕಿದ್ದು ಆಗಸ್ಟ್ 14ರಂದು ಶಾಲೆ ಶೂನ್ಯ ಹಾಜರಿಯನ್ನು ದಾಖಲಿಸಿದೆ. ಈ ಶಾಲೆಗೆ ನಾಲ್ಕು ಶಿಕ್ಷಕರ ಆದ್ಯತೆ ಇದ್ದು ಓರ್ವ ಶಿಕ್ಷಕರು ತಾಂತ್ರಿಕ ಕಾರಣಗಳಿಂದಾಗಿ ತಿಂಗಳ ನಂತರ ಶಾಲೆಗೆ ನಿಯೋಜನೆಗೊಳ್ಳುವ ಸಾಧ್ಯತೆ ಇದೆ,ಇನ್ನೋರ್ವ ಶಿಕ್ಷಕಿ ಕೆಲ ಸಮಯಗಳ ಹಿಂದೆ ವರ್ಗಾವಣೆಗೊಂಡಿದ್ದು ಅವರ ಬದಲಿಗೆ ಅತಿಥಿ ಶಿಕ್ಷಕರನ್ನ ನಿಯೋಜಿಸಲಾಗಿದೆ.

ಅನಾರು ಶಾಲೆಯ ಗೌರವಕ್ಕೆ ಚ್ಯುತಿ ತರುವ ಮಾಧ್ಯಮಗಳಲ್ಲಿನ ಹೇಳಿಕೆಗೆ ಖಂಡನೆ
ಪಟ್ರಮೆಯ ಅನಾರು ಶಾಲೆಯು ಎಂಟು ತರಗತಿಗಳನ್ನು ಹೊಂದಿಯೂ ಕೇವಲ ಇಬ್ಬರು ಶಿಕ್ಷಕರನ್ನು ಹೊಂದಿರುವ ಕಾರಣಕ್ಕೆ ಮಕ್ಕಳಿಗೆ ಪಾಠಗಳು ಸರಿಯಾಗಿ ಆಗುತ್ತಿಲ್ಲ, ಮಕ್ಕಳನ್ನು ನೋಡ್ಕೊಳ್ಳಲೂ ಅಸಾಧ್ಯವಾದ ಸ್ಥಿತಿ ಇದೆ, ಇದಕ್ಕಾಗಿ ಪೋಷಕರು ತಿಳಿಸಿದ್ದಾರೆ. ಆದರೆ ಈ ನೋವಿನ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು, ತಮ್ಮ ಬೇಳೆ ಬೇಯಿಸಲೋ ಎಂಬಂತೆ ಶಾಲೆಯ ಘನತೆಗೆ ಚ್ಯುತಿ ತರುವ ರೀತಿಯಲ್ಲಿ ಮಾಧ್ಯಮದಲ್ಲಿ ಹೇಳಿಕೆ ಕೊಟ್ಟರೆ, ಅದು ಶಾಲಾ ವಿರೋಧಿ ಹೇಳಿಕೆ ಆಗುತ್ತದೆ. ಬಿದ್ದವನ ಮೇಲೆ ಮತ್ತೂ ಕಲ್ಲು ಹೊತ್ತು ಹಾಕಿದಂತಾಗುತ್ತದೆ. ಆ ಹೇಳಿಕೆಗಳ ಪ್ರಕಾರ ಶಿಕ್ಷಕರಿಲ್ಲದಿದ್ದರೆ ಮನವಿ ಕೊಡಬೇಕು, ಅದುಬಿಟ್ಟು ಮುಷ್ಕರ ಸರಿಯಾ? ದೇಶದ್ರೋಹಿಗಳು ಎಂದೆಲ್ಲಾ ಹೇಳುತ್ತಾರೆ. ಬೇಸರ ಅಂದರೆ ಅವರೇ ಈ ವರ್ಷವೇ ಶಿಕ್ಷಕರ ಕೊರತೆ ಕಾರಣಕ್ಕೇ ತಮ್ಮ ಮಕ್ಕಳನ್ನು ಬೇರೆ ಖಾಸಗಿ ಶಾಲೆಗೆ ಕಳುಹಿಸುತ್ತಿರುವುದಾಗಿದೆ. ಶಾಲಾವತಿಯಿಂದ, ಊರವರ ವತಿಯಿಂದ ಒಂದು ತಿಂಗಳ ಮೊದಲೇ ಮನವಿ ಕೊಟ್ಟ ಮಾಹಿತಿಯೂ ಅವರಿಗಿದ್ದಂತಿಲ್ಲ. ಸಮಸ್ಯೆ ಎಲ್ಲಾ ಶಾಲೆಗಳಲ್ಲೂ ಇದೆ, ಇಲ್ಲಿ ಮಾತ್ರ ಅಲ್ಲ ಅಂತಾರೆ. ಅಂದರೆ ಸರಕಾರಿ ಶಾಲಾ ಮಕ್ಜಳು ಹೀಗೇ ಇರಲಿ ಎಂದವರ ಅಭಿಪ್ರಾಯವೋ? ಅಥವಾ ಶಿಕ್ಷಕರು ಭರ್ತಿ ಇರುವ ಶಾಲೆಗಳ ಮಾಹಿತಿ ಇಲ್ಲವೇ? ಮಕ್ಕಳನ್ನು ಹಿಂದೆ ಕಳಿಸಿದ್ದಾರೆ ಎಂದೆಲ್ಲ ಹೇಳುತ್ತಾರೆ. ಸುಮ್ಮನೆ ಸುಳ್ಳು ಆಪಾದನೆ ಮೂಲಕ ಶಾಲೆಯ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸುವುದು ದೇಶಪ್ರೇಮವೇ? ನಾಲ್ಕು ಜನ ಶಿಕ್ಷಕರು ಅಂತಾರೆ. ಇದರ ಬಗ್ಗೆಯೂ ಮಾಹಿತಿ ಇಲ್ಲ ಅವರಿಗೆ. ಇಬ್ಬರು ಶಿಕ್ಷಕರಿರುವುದು, ಮತ್ತೊಬ್ಬರು ಗೌರವ ಶಿಕ್ಷಕಿ ಕೊಕ್ಕಡದಿಂದ ಬರಬೇಕು. ಅವರಿಗೆ ಪಟ್ರಮೆಯಿಂದ ಅನಾರು ಶಾಲೆಗೆ ಹೋಗಿ ಬರಲು ದಿನಕ್ಕೆ 200 /- ಖರ್ಚು ಇದೆ, ಅದನ್ನು ಭರಿಸುವುದು ಯಾರೂ? ಶಾಲಾ ವಿರೋಧಿ ಹೇಳಿಕೆ ಕೊಟ್ಟವರು ಕೊಡುತ್ತಾರೆಯೇ? ಇದ್ಯಾವುದನ್ನೂ ಅರಿಯದೆ, ಏಕಾಏಕಿ ಶಾಲೆಗೆ ಬಂದು, ಸಮಸ್ಯೆಯ ಬಗ್ಗೆ ಅರ್ಥಮಾಡಿಕೊಳ್ಳದೆ ಮಾದ್ಯಮಗಳ ಮೂಲಕ ತಪ್ಪು ಹೇಳಿಕೆ ಕೊಟ್ಟು, ಶಾಲಾ ಪೋಷಕರನ್ನು ದೇಶದ್ರೋಹಿಗಳೆಂದು ಅವಮಾನ ಮಾಡಿರುವುದು ಖಂಡನೀಯವಾಗಿದೆ. ಸಾಧ್ಯ ಇದ್ದರೆ ಶಿಕ್ಷಕರನ್ನು ಒದಗಿಸುವ ಕೆಲಸ ಮಾಡಲಿ. ಶಾಲಾ ಮಕ್ಕಳಿಗಾಗಿ ಇರುವ ಮೈದಾನವನ್ನು ಶಾಲಾ ಮಕ್ಕಳಿಗೇ ಬಿಟ್ಟುಕೊಡಲಿ. ಆ ಮೂಲಕ ಮೊದಲು ರೂಢಿಸಿಕೊಳ್ಳಲಿ ಎಂದು ಮಾಜಿ ಗ್ರಾ,ಪಂ. ಸದಸ್ಯ ಶ್ಯಾಮರಾಜ್ ಪಟ್ರಮೆ ತಿಳಿಸಿದ್ದಾರೆ.

Leave a Reply

error: Content is protected !!