ನೇಸರ ಜ.25: ಮಡಿಕೇರಿ ತಾಲ್ಲೂಕಿನ ಸಂಪಾಜೆ ಅರಣ್ಯ ತಪಾಸಣಾ ಗೇಟ್ ಬಳಿ ದಿನಾಂಕ 24.01.2022 ರಂದು ರಾತ್ರಿ ಸುಮಾರು 12.00 ಗಂಟೆಗೆ KA-05- AA 8605 ನೋಂದಣಿ ಸಂಖ್ಯೆಯ ಐಶರ್ ಲಾರಿಯಲ್ಲಿ ಯಾರಿಗೂ ಸಂಶಯ ಬಾರದ ರೀತಿಯಲ್ಲಿ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದಾಗ ಪತ್ತೆ ಹಚ್ಚಿದ ಇಲಾಖಾ ಅಧಿಕಾರಿಗಳು ಲಾರಿ ಸಮೇತ ಸುಮಾರು 30 ಕ್ಕೂ ಗೋವುಗಳನ್ನು ವಶಕ್ಕೆ ಪಡೆದಿದ್ದಾರೆ.
ಇಲಾಖಾ ಸಿಬ್ಬಂದಿಗಳು ತಪಾಸಣೆಗೆ ಮುಂದಾಗುತ್ತಿದ್ದಂತೆ ಲಾರಿಯಲ್ಲಿದ್ದ ಆರೋಪಿಗಳು ಲಾರಿಯಿಂದ ಜಿಗಿದು ಓಡಿ ಕತ್ತಲ್ಲಲ್ಲಿ ಪರಾರಿಯಾಗಿರುತ್ತಾರೆ.ಒಂದಷ್ಟು ದೂರ ಸಿಬ್ಬಂದಿಗಳು ಬೆನ್ನಟ್ಟಿದರಾದರೂ ಕತ್ತಲು ಆವರಿಸಿದ್ದ ಕಾರಣ ಆರೋಪಿಗಳು ಪರಾರಿಯಾದರು. ಆರೋಪಿಗಳು ಗೋವುಗಳನ್ನು ತುಂಬಿಕೊಂಡು ಮಡಿಕೇರಿ ಮಾರ್ಗದಿಂದ ಸುಳ್ಯ ಕಡೆಗೆ ತೆರಳುತ್ತಿದ್ದು ಸಂಪಾಜೆ ಗೇಟ್ ಬಳಿ ತಪಾಸಣೆ ವೇಳೆಗೆ ಅಕ್ರಮ ಗೋ ಸಾಗಾಟ ಬೆಳಕಿಗೆ ಬಂದಿದೆ.
ಸಂಪಾಜೆ ಚೆಕ್ ಪೋಸ್ಟ್ ಮೂಲಕ ನಿರಂತರವಾಗಿ ಕೇರಳ ಮತ್ತು ಮಂಗಳೂರಿನ ಕಸಾಯಿಖಾನೆಗಳಿಗೆ ಅಕ್ರಮವಾಗಿ ಗೋಸಾಗಾಟವಾಗುತ್ತಿರುವ ಬಗ್ಗೆ ಹಿಂದು ಜಾಗರಣ ವೇದಿಕೆಯು ಹಲವು ಬಾರಿ ಪೋಲೀಸ್ ಇಲಾಖೆಗೆ ಮಾಹಿತಿ ನೀಡಿತ್ತು.ಇದೀಗ ಪತ್ತೆಯಾದ ಅಕ್ರಮ ಗೋಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.