ಎರಡು ಸಾವಿರ ರೂ ನೋಟುಗಳ ವಿನಿಮಯಕ್ಕೆ ಡೆಡ್​ಲೈನ್ ವಿಸ್ತರಣೆ; ಅಕ್ಟೋಬರ್​ವರೆಗೂ ಕಾಲಾವಕಾಶ ಸಿಗುವ ಸಾಧ್ಯತೆ

ಶೇರ್ ಮಾಡಿ

ಚಲಾವಣೆಯಿಂದ ಹಿಂಪಡೆಯಲಾಗಿರುವ 2,000 ರೂ ಮುಖಬೆಲೆಯ ನೋಟುಗಳನ್ನು ಮರಳಿಸಲು ಮತ್ತು ವಿನಿಮಯ ಮಾಡಿಕೊಳ್ಳಲು ಸೆಪ್ಟೆಂಬರ್ 30ರವರೆಗೆ ನೀಡಲಾಗಿದ್ದ ಕಾಲಾವಕಾಶವನ್ನು ಒಂದು ತಿಂಗಳು ವಿಸ್ತರಿಸಿರುವುದು ತಿಳಿದುಬಂದಿದೆ. ಮನಿಕಂಟ್ರೋಲ್​ನಲ್ಲಿ ಪ್ರಕಟವಾಗಿರುವ ವರದಿ ಪ್ರಕಾರ ಅಕ್ಟೋಬರ್ 31ರವರೆಗೂ 2,000 ರೂ ನೋಟುಗಳನ್ನು ವಿನಿಮಯ ಮಾಡಲು ಅವಕಾಶ ನೀಡಲಾಗುತ್ತದೆಯಂತೆ. ಆದರೆ, ಈ ಬಗ್ಗೆ ಯಾವುದೇ ಅಧಿಸೂಚನೆಯನ್ನಾಗಲೀ ಅಥವಾ ಪ್ರಕಟಣೆಯನ್ನಾಗಲೀ ಆರ್​ಬಿಐ ನೀಡಿಲ್ಲ. ಇಂದು ಅಥವಾ ನಾಳೆ ಆರ್​ಬಿಐ ಈ ಬಗ್ಗೆ ಅಧಿಕೃತವಾಗಿ ಹೇಳಿಕೆ ಹೊರಡಿಸಬಹುದು ಎಂದು ನಿರೀಕ್ಷಿಸಬಹುದು.

ಚಲಾವಣೆಯಲ್ಲಿದ್ದ ಎರಡು ಸಾವಿರ ರೂ ಮುಖಬೆಲೆಯ ನೋಟುಗಳ ಪೈಕಿ ಶೇ. 90ಕ್ಕೂ ಹೆಚ್ಚು ನೋಟುಗಳು ಬ್ಯಾಂಕುಗಳಿಗೆ ಮರಳಿವೆ. ಸೆಪ್ಟೆಂಬರ್ 1ರಂದು ಆರ್​ಬಿಐ ಮಾಹಿತಿ ನೀಡಿದ ಪ್ರಕಾರ ಶೇ. 93ರಷ್ಟು ನೋಟುಗಳು, ಅಂದರೆ ಸುಮಾರು 3.32 ಲಕ್ಷಕೋಟಿ ರೂ ಮೌಲ್ಯದ ನೋಟುಗಳು ಮರಳಿವೆ. ಇತ್ತೀಚಿನ ದಿನಗಳಲ್ಲಿ ವಿನಿಮಯವಾದ ನೋಟುಗಳ ಪ್ರಮಾಣ ತುಸು ಹೆಚ್ಚಿದೆ. ಶೇ. 95ಕ್ಕಿಂತಲೂ ಹೆಚ್ಚು ನೋಟುಗಳು ಆರ್​ಬಿಐಯನ್ನು ತಲುಪಿರಬಹುದು.

ಅನಿವಾಸಿ ಭಾರತೀಯರು ಮತ್ತು ವಿದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯರ ಬಳಿ ಕೆಲವಿಷ್ಟು 2,000 ರೂ ನೋಟುಗಳಿರಬಹುದು. ಅವರು ಮರಳಿಸಲು ಅಥವಾ ವಿನಿಮಯ ಮಾಡಲು ಹೆಚ್ಚಿನ ಕಾಲಾಕಾಶ ಬೇಕಾಗಬಹುದು. ಹೀಗಾಗಿ, ಆರ್​ಬಿಐ ಸೆಪ್ಟೆಂಬರ್ 30ರ ಗಡುವನ್ನು ಅಕ್ಟೋಬರ್ 31ರವರೆಗೂ ವಿಸ್ತರಿಸಲು ನಿರ್ಧರಿಸಿರಬಹುದು ಎಂದು ಮನಿಕಂಟ್ರೋಲ್ ತನ್ನ ಅಧಿಕೃತ ಮೂಲವೊಂದನ್ನು ಉಲ್ಲೇಖಿಸಿ ವರದಿ ಮಾಡಿದೆ.

ಕೆಲ ಬ್ಯಾಂಕರ್​ಗಳ ಪ್ರಕಾರ, ಪ್ರತಿಯೊಂದು ನೋಟು ಕೂಡ ಮರಳುವ ನಿಟ್ಟಿನಲ್ಲಿ ಆರ್​ಬಿಐ ವಿವಿಧ ಮಾರ್ಗೋಪಾಯಗಳನ್ನು ಮಾಡುವ ಸಾಧ್ಯತೆ ಇದೆ. ನಿಗದಿತ ಕಾಲದಲ್ಲಿ 2,000 ರೂ ನೋಟುಗಳನ್ನು ಡೆಪಾಸಿಟ್ ಮಾಡಲಾಗದವರಿಗೆ ಗಡುವು ವಿಸ್ತರಣೆ ಸೇರಿದಂತೆ ಬೇರೆ ಬೇರೆ ರೀತಿಯಲ್ಲಿ ಅವಕಾಶಗಳನ್ನು ಆರ್​ಬಿಐ ಮಾಡಿಕೊಡಲಿದೆ. ಈ ನಿಟ್ಟಿನಲ್ಲಿ ಸೆಪ್ಟೆಂಬರ್ 30ರ ಗಡುವನ್ನು ಅಕ್ಟೋಬರ್ ಕೊನೆಯವರೆಗೂ ವಿಸ್ತರಿಸಬಹುದು ಎನ್ನಲಾಗಿದೆ.

2016ರಲ್ಲಿ ಸರ್ಕಾರ ನೋಟ್ ಬ್ಯಾನ್ ಕ್ರಮ ಕೈಗೊಂಡು 1,000 ರೂ ಮತ್ತು 500 ರೂ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿತು. ಅದಕ್ಕೆ ಬದಲಾಗಿ 2,000 ರೂ ನೋಟುಗಳನ್ನು ಮುದ್ರಿಸಿತು. 2018ರಲ್ಲಿ ಆರ್​ಬಿಐ 2,000 ರೂ ನೋಟುಗಳ ಮುದ್ರಣ ನಿಲ್ಲಿಸಿತೆಂದು ಹೇಳಲಾಗುತ್ತಿದೆ. ಆಗಲೇ 2,000 ರೂ ನೋಟುಗಳನ್ನು ಅಮಾನ್ಯಗೊಳಿಸಬಹುದು ಎಂದು ನಂಬಲಾಗಿತ್ತು. ಆದರೆ, 2023ರ ಮೇ 19ರಂದು ಆರ್​​ಬಿಐ 2,000 ರೂ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುತ್ತಿರುವುದಾಗಿ ಘೋಷಿಸಿತು. ಆದರೆ, ಅದನ್ನು ಅಮಾನ್ಯ ಮಾಡಿಲ್ಲ.

ಈವರೆಗೆ ಮರಳಿರುವ 2,000 ರೂ ನೋಟುಗಳಲ್ಲಿ ಹೆಚ್ಚಿನವು ವ್ಯವಹಾರ ಸಂಸ್ಥೆಗಳಿಂದ ಡೆಪಾಸಿಟ್ ಆಗಿರುವಂಥವು. ವೈಯಕ್ತಿಕ ಗ್ರಾಹಕರಿಂದ ಹೆಚ್ಚಿನ ಪ್ರಮಾಣದಲ್ಲಿ 2,000 ರೂ ನೋಟುಗಳು ಬಂದಿಲ್ಲ ಎಂದು ಹೇಳಲಾಗುತ್ತಿದೆ.

Leave a Reply

error: Content is protected !!