ನಮಗೆ ವಯಸ್ಸಾದಂತೆ ದೇಹದ ಎಲ್ಲಾ ಅಂಗಗಳಿಗೂ ವಯಸ್ಸಾಗಲು ಶುರುವಾಗುತ್ತದೆ. ನಮ್ಮ ಚರ್ಮವೂ ಇದಕ್ಕೆ ಹೊರತಾಗಿಲ್ಲ. ಮುಖದ ಚರ್ಮ ಸುಕ್ಕುಗಟ್ಟಿದಂತೆ ಕಾಣಲಾರಂಭಿಸಿದಂತೆ ನಮಗೆ ತ್ವಚೆಯ ಸೌಂದರ್ಯದ ಬಗ್ಗೆ ಆತಂಕ ಹೆಚ್ಚಾಗುತ್ತದೆ. ಚರ್ಮ ಸುಕ್ಕಾಗದಂತೆ ಕಾಣಲು ಏನೇನೋ ಚಿಕಿತ್ಸೆಗಳನ್ನು ಕೂಡ ಪಡೆಯುವವರಿದ್ದಾರೆ. ಆದರೆ, ಮನೆಯಲ್ಲೇ ಇರುವ ಕೆಲವು ವಸ್ತುಗಳಿಂದ ಚರ್ಮ ಬೇಗ ಸುಕ್ಕಾಗದಂತೆ ನೋಡಿಕೊಳ್ಳಬಹುದು.
ಸಮಯ ಕಳೆದಂತೆ ನಮ್ಮ ದೇಹದ ಅಂಗಗಳಿಗೂ ವಯಸ್ಸಾಗುತ್ತದೆ. ಆದರೆ, ಈ ಕ್ರಿಯೆ ಒಬ್ಬರಿಂದ ಮತ್ತೊಬ್ಬರಿಗೆ ವಿಭಿನ್ನವಾಗಿರುತ್ತದೆ. ಕೆಲವರ ತ್ವಚೆ 35 ವರ್ಷಕ್ಕೇ ಸುಕ್ಕುಗಟ್ಟತೊಡಗಬಹುದು. ಇನ್ನು ಕೆಲವರ ತ್ವಚೆ 60 ವರ್ಷವಾದರೂ ಬಿಗಿಯಾಗಿರಬಹುದು. ಚರ್ಮದಲ್ಲಿನ ಎಲಾಸ್ಟಿನ್ ಒಂದು ಪ್ರೋಟೀನ್ ಆಗಿದ್ದು, ಅದು ಚರ್ಮಕ್ಕೆ ಬಿಗಿತ ಮತ್ತು ಸ್ಥಿತಿಸ್ಥಾಪಕತ್ವವನ್ನು ನೀಡುತ್ತದೆ. ವಯಸ್ಸಾದಂತೆ ಚರ್ಮದಲ್ಲಿನ ಎಲಾಸ್ಟಿನ್ ಪ್ರಮಾಣವು ಕಡಿಮೆಯಾಗುತ್ತದೆ. ಇದರ ಪರಿಣಾಮವಾಗಿ ಚರ್ಮವು ಅದರ ಮೃದುತ್ವ ಕಳೆದುಕೊಳ್ಳುತ್ತದೆ. ಇದರಿಂದಾಗಿ ಚರ್ಮವು ಸಡಿಲವಾಗುತ್ತದೆ. ಚರ್ಮದ ಕೆಳಗಿರುವ ಕೊಬ್ಬಿನಂಶ ಕಡಿಮೆಯಾಗಿ ಚರ್ಮ ಅದರಲ್ಲೂ ವಿಶೇಷವಾಗಿ ಮುಖದ ಚರ್ಮ ಸಡಿಲವಾಗುತ್ತದೆ.
ಇದರ ಹೊರತಾಗಿ ಬಾಹ್ಯ ಅಂಶಗಳ ಕಾರಣದಿಂದಾಗಿಯೂ ಮುಖದಲ್ಲಿ ಸುಕ್ಕುಗಳು ಉಂಟಾಗುತ್ತದೆ. ಸೂರ್ಯನಿಗೆ ಚರ್ಮವನ್ನು ಹೆಚ್ಚು ಒಡ್ಡಿಕೊಳ್ಳುವುದು ಈ ಕಾರಣಗಳಲ್ಲೊಂದು. ಸೂರ್ಯನ ಪ್ರಭಾವದಿಂದ ಚರ್ಮದ ಹಾನಿಯು ಕಾಲಜನ್ ಪ್ರಮಾಣದಲ್ಲಿ ಗಮನಾರ್ಹ ಇಳಿಕೆಗೆ ಕಾರಣವಾಗುತ್ತದೆ. ಧೂಮಪಾನ, ಮಾಲಿನ್ಯ, ಕಳಪೆ ಆಹಾರ, ಆಲ್ಕೋಹಾಲ್ ಸೇವನೆ ಮತ್ತು ಸೂರ್ಯನ ಯುವಿ ವಿಕಿರಣಕ್ಕೆ ಒಡ್ಡಿಕೊಳ್ಳುವುದು ಮುಖದ ಚರ್ಮದ ಅಂದವನ್ನು ಹಾಳು ಮಾಡುತ್ತದೆ.
ಚರ್ಮದ ಸೌಂದರ್ಯ ಕಾಪಾಡಿಕೊಳ್ಳುವುದು ಹೇಗೆ? ಎಂಬುದಕ್ಕೆ ನೈಸರ್ಗಿಕ ಪರಿಹಾರಗಳು ಇಲ್ಲಿವೆ:
– ಅರ್ಗಾನ್ ಎಣ್ಣೆ, ಬಾದಾಮಿ ಎಣ್ಣೆ, ಆವಕಾಡೊ ಎಣ್ಣೆಯು ಚರ್ಮವನ್ನು ಮೃದುಗೊಳಿಸುತ್ತದೆ ಮತ್ತು ಚರ್ಮದ ಟೋನ್ ಮತ್ತು ಮೈಬಣ್ಣವನ್ನು ಸುಧಾರಿಸುತ್ತದೆ. ಇದು UV ವಿಕಿರಣದಿಂದ ಉಂಟಾಗುವ ಚರ್ಮದ ಹಾನಿಯನ್ನು ತಡೆಯುತ್ತದೆ. ಆವಕಾಡೊ ಎಣ್ಣೆಯು ತ್ವಚೆಯ ಬಿಗಿತವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಪ್ರಮುಖ ಅಂಶವಾದ ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ.
– ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್, ಜೀವಸತ್ವಗಳು ಮತ್ತು ನೈಸರ್ಗಿಕ ತೈಲಗಳು ಸಮೃದ್ಧವಾಗಿದೆ. ಇವು ಚರ್ಮದ ಸುಕ್ಕುಗಳನ್ನು ಕಡಿಮೆ ಮಾಡುತ್ತವೆ. ಹಣ್ಣಾದ ಬಾಳೆಹಣ್ಣಿನ ಕಾಲು ಭಾಗವನ್ನು ನಯವಾದ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಸ್ವಚ್ಛವಾದ ಮುಖಕ್ಕೆ ಹಚ್ಚಿಕೊಳ್ಳಿ. 15-20 ನಿಮಿಷಗಳ ಕಾಲ ಅದನ್ನು ಬಿಡಿ. ಮೊದಲು ತಣ್ಣೀರಿನ ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ.
– ಸೌತೆಕಾಯಿಯು ಎಲಾಸ್ಟಿನ್ ಮತ್ತು ಹೈಲುರಾನಿಕ್ ಆಮ್ಲವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ, ಇದು ದೃಢವಾದ ಚರ್ಮವನ್ನು ಕಾಪಾಡಿಕೊಳ್ಳಲು ಅವಶ್ಯಕವಾಗಿದೆ. ಸೌತೆಕಾಯಿಯನ್ನು ಸಿಪ್ಪೆ ತೆಗೆದು, ಅದನ್ನು ಬ್ಲೆಂಡರ್ನಲ್ಲಿ ಜ್ಯೂಸ್ ಮಾಡಿ. ಸ್ವಚ್ಛವಾದ ಹತ್ತಿ ಉಂಡೆಯನ್ನು ತೆಗೆದುಕೊಂಡು ಈ ರಸವನ್ನು ಚರ್ಮದ ಮೇಲೆ ಹಚ್ಚಿ. 15-20 ನಿಮಿಷಗಳ ನಂತರ ತೊಳೆಯಿರಿ.
– ಅನಾನಸ್ ಕಿಣ್ವ ಸೇರಿದಂತೆ ಹಲವಾರು ಪದಾರ್ಥಗಳನ್ನು ಒಳಗೊಂಡಿದೆ. ಇದು ಚರ್ಮದ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಹಾನಿಗೊಳಗಾದ ಚರ್ಮದ ಕೋಶಗಳನ್ನು ತೆಗೆದುಹಾಕುತ್ತದೆ. ಇದು ಚರ್ಮದ ನೀರಿನಂಶವನ್ನು ಹೆಚ್ಚಿಸುತ್ತದೆ ಮತ್ತು ಚರ್ಮಕ್ಕೆ ಹೊಳೆಯುವ ಸೌಂದರ್ಯ ನೀಡುತ್ತದೆ. ಅನಾನಸ್ ಅನ್ನು ಸರಿಯಾಗಿ ಸಿಪ್ಪೆ ತೆಗೆದು, ಮಿಕ್ಸಿಯಲ್ಲಿ ಜ್ಯೂಸ್ ಮಾಡಿ. ಹತ್ತಿ ಉಂಡೆಯನ್ನು ತೆಗೆದುಕೊಂಡು ಈ ರಸವನ್ನು ಚರ್ಮಕ್ಕೆ ಹಚ್ಚಿ. 15-20 ನಿಮಿಷಗಳ ನಂತರ ತೊಳೆಯಿರಿ.
– ಅಲೋವೆರಾದಲ್ಲಿ ಕಂಡುಬರುವ ಜೆಲ್ ಚರ್ಮದ ಬಿಗಿತ ಹೆಚ್ಚಿಸುತ್ತದೆ. ಇದು ಕಾಲಜನ್ ಮತ್ತು ಹೈಲುರಾನಿಕ್ ಆಮ್ಲದ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಹೀಗಾಗಿ ಸುಕ್ಕುಗಳನ್ನು ತಡೆಯುತ್ತದೆ.
– ಕಾಫಿಯು ಕೆಫೀನ್ ಅನ್ನು ಹೊಂದಿರುತ್ತದೆ. ಇದು ಆಕ್ಸಿಡೇಟಿವ್ ಒತ್ತಡದಿಂದಾಗಿ ಚರ್ಮವನ್ನು ವಯಸ್ಸಾಗದಂತೆ ರಕ್ಷಿಸುತ್ತದೆ. ಪೇಸ್ಟ್ ಮಾಡಲು ಸ್ವಲ್ಪ ಕಾಫಿ ಪುಡಿಯನ್ನು ನೀರಿನೊಂದಿಗೆ ಬೆರೆಸಿ. ಈ ಪೇಸ್ಟ್ ಅನ್ನು ನಿಧಾನವಾಗಿ ವೃತ್ತಾಕಾರದ ಚಲನೆಯಲ್ಲಿ ಚರ್ಮದ ಮೇಲೆ ಉಜ್ಜಿಕೊಳ್ಳಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆಯಿರಿ.
– ಜೇನುತುಪ್ಪ ಚರ್ಮದ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸುತ್ತದೆ. ಸುಕ್ಕುಗಳನ್ನು ನಿವಾರಿಸುತ್ತದೆ. ಬಟ್ಟಲಿನಲ್ಲಿ ಅಗತ್ಯ ಪ್ರಮಾಣದ ಜೇನುತುಪ್ಪವನ್ನು ತೆಗೆದುಕೊಳ್ಳಿ. ಇದಕ್ಕೆ ಸ್ವಲ್ಪ ನೀರು ಸೇರಿಸಿ. ಇದನ್ನು ಸುಕ್ಕುಗಳಿರುವ ಜಾಗಕ್ಕೆ ಹಚ್ಚಿಕೊಂಡು 15-20 ನಿಮಿಷಗಳ ಕಾಲ ಇಟ್ಟುಕೊಳ್ಳಿ. ನಂತರ ಉಗುರುಬೆಚ್ಚನೆಯ ನೀರಿನಿಂದ ತೊಳೆಯಿರಿ.
– ಚರ್ಮದ ತೇವಾಂಶದ ಮಟ್ಟವನ್ನು ಕಾಪಾಡಿಕೊಳ್ಳಲು ಸಾಕಷ್ಟು ನೀರು (2 ಲೀಟರ್‌ಗಿಂತ ಹೆಚ್ಚು) ಕುಡಿಯುವುದು ಅವಶ್ಯಕ. ಧೂಮಪಾನ ಮತ್ತು ಅತಿಯಾದ ಆಲ್ಕೋಹಾಲ್ ಸೇವನೆಯನ್ನು ತ್ಯಜಿಸುವುದು ಉತ್ತಮ. ಸೂಕ್ತವಾದ ಮಾಯಿಶ್ಚರೈಸರ್ ಬಳಕೆಯು ತೇವಾಂಶವನ್ನು ಲಾಕ್ ಮಾಡಲು ಸಹಾಯ ಮಾಡುತ್ತದೆ. ಇದು ಚರ್ಮವನ್ನು ನಯವಾಗಿಡಲು ಸಹಾಯ ಮಾಡುತ್ತದೆ. ಮುಖಕ್ಕೆ ಉತ್ತಮ ಸನ್‌ಸ್ಕ್ರೀನ್ ಲೋಷನ್ ಹಚ್ಚಿಕೊಳ್ಳುವುದನ್ನು ಮರೆಯಬೇಡಿ.