ಪೆರಿಂಜೆ : ಜೀವನ ಮೌಲ್ಯ ತಿಳಿಯಲು ಹಾಗೂ ಸಬಲೀಕರಣಕ್ಕೆ ರಾಷ್ಟ್ರೀಯ ಸೇವಾ ಯೋಜನೆ ಬುನಾದಿಯಾಗಿದೆ. ಹಳ್ಳಿ ಜೀವನ ಅರಿಯಲು, ಸಂಸ್ಕಾರಯುತ ವಿಷಯ ಅರಿಯಲು, ಸಹಬಾಳ್ವೆಗೆ ವಾರ್ಷಿಕ ಶಿಬಿರಗಳು ಮುಖ್ಯವಾಗುತ್ತವೆ. ಒಟ್ಟಾರೆ ಬದುಕಿಗೆ ಸ್ಫೂರ್ತಿ ಪಡೆಯಲು ರಾಷ್ಟ್ರೀಯ ಸೇವಾ ಯೋಜನೆ ಅಡಿಪಾಯ ಎಂದು ಪೆರಿಂಜೆ ಶ್ರೀ ಕ್ಷೇತ್ರ ಪಡ್ಯಾರಬೆಟ್ಟದ ಧರ್ಮದರ್ಶಿ ಎ.ಜೀವಂಧರ ಕುಮಾರ್ ಹೇಳಿದರು.
ಇವರು ಪೆರಿಂಜೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢ ಶಾಲೆಯಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಅವರು ಮಾತನಾಡಿ ಇಂತಹ ಶಿಬಿರಗಳು ವಿದ್ಯಾರ್ಥಿಗಳಿಗೆ ಆರೋಗ್ಯವಾದ ಜೀವನ ನಡೆಸಲು, ಶಿಸ್ತಿನ ಜೀವನಕ್ಕೆ ಸಹಕಾರಿಯಾಗುತ್ತದೆ. ಪಠ್ಯ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಿ ಎಂದು ಕರೆಕೊಟ್ಟರು.
ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಎಂ.ಪಿ ಶ್ರೀನಾಥ್ ಅವರು ‘ ಸ್ವಚ್ಛ ಪರಿಸರ ಮತ್ತು ಸ್ವಸ್ಥ ಸಮಾಜಕ್ಕೆ ಯುವಜನತೆ’ ಎಂಬ ಶೀರ್ಷಿಕೆಯ ಕರಪತ್ರವನ್ನು ಬಿಡುಗಡೆಗೊಳಿಸಿದರು.
ನಿವೃತ್ತ ಪ್ರಾಚಾರ್ಯ ಪ್ರೊ.ಎನ್.ದಿನೇಶ ಚೌಟ ಹಾಗೂ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ಬಿ.ಸೋಮಶೇಖರ ಶೆಟ್ಟಿ ಶುಭಾಶಂಸನೆ ಮಾಡಿದರು.
ಜಿಲ್ಲಾ ಪಂಚಾಯತ್ ಇದರ ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್, ಉಜಿರೆ ಶ್ರೀ ಧ.ಮಂ ಪ.ಪೂ ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್, ಶ್ರೀ ಧ.ಮಂ ಸ್ವಾಯತ್ತ ಕಾಲೇಜಿನ ರಾ.ಸೇ ಯೋಜನಾಧಿಕಾರಿ ಡಾ.ಮಹೇಶ ಕುಮಾರ ಶೆಟ್ಟಿ, ಪ್ರಗತಿಪರ ಕೃಷಿಕ ಶಂಕರ್ ಭಟ್ ಬಾಲ್ಯಾ ಅವರು ಹಿತನುಡಿಗನ್ನಾಡಿದರು.
ವೇದಿಕೆಯಲ್ಲಿ ಶ್ರೀ ಧ.ಮಂ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಮುಕುಂದಚಂದ್ರ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಕರುಣಾಕರ ಪೂಜಾರಿ, ಉಜಿರೆ ಶ್ರೀ ಧ.ಮಂ ಪ.ಪೂ ಕಾಲೇಜಿನ ಉಪ ಪ್ರಾಚಾರ್ಯ ಡಾ.ರಾಜೇಶ್ ಬಿ, ಶಿಬಿರ ಸಮಿತಿಯ ಕಾರ್ಯದರ್ಶಿ ವಿದ್ಯಾನಂದ ಜೈನ್ ಉಪಸ್ಥಿತರಿದ್ದರು. ರಾ.ಸೇ ಯೋಜನೆಯ ಘಟಕ ನಾಯಕರಾದ ಸುದರ್ಶನ್ ನಾಯಕ್ ಹಾಗೂ ದಕ್ಷಾ ಉಪಸ್ಥಿತರಿದ್ದರು.
ಶಿಬಿರ ಸಮಿತಿಯ ಅಧ್ಯಕ್ಷ ವಿಕಾಸ್ ಜೈನ್ ಹಾಗೂ ಪ್ರಾಚಾರ್ಯ ಪ್ರಮೋದ್ ಕುಮಾರ್ ಅವರು ಅತಿಥಿಗಳನ್ನು ಗೌರವಿಸಿದರು. ಸ್ವಯಂ ಸೇವಕಿ ಮಹಾಲಕ್ಷ್ಮೀ ಸಂದೇಶ ಪತ್ರ ವಾಚಿಸಿದರು.
ರಾ.ಸೇ ಯೋಜನೆಯ ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ ಸ್ವಾಗತಿಸಿದರು. ಸಹ ಯೋಜನಾಧಿಕಾರಿ ಪದ್ಮಶ್ರೀ ರಕ್ಷಿತ್ ವಂದಿಸಿದರು. ಸ್ವಯಂ ಸೇವಕಿ ಪಲ್ಲವಿ ನಿರೂಪಿಸಿದರು.