ಬೆಳ್ತಂಗಡಿ ತಾಲೂಕಿನೆಲ್ಲೆಡೆ ರವಿವಾರ ಸುರಿದ ಭಾರಿ ಮಳೆಯಿಂದಾಗಿ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳು ಹೊಳೆಯಂತಾಗಿವೆ.
ಸತತ ಬಿಸಿಲಿನಿಂದ ತತ್ತರಿಸಿದ್ದ ಜನತೆಗೆ ಕಳೆದ ಮೂರು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಅದರಲ್ಲೂ ರವಿವಾರ ಭಾರಿ ಮಳೆಯಾಗಿದೆ. ಪರಿಣಾಮ ಗುರುವಾಯನಕೆರೆ- ಉಪ್ಪಿನಂಗಡಿ ರಸ್ತೆ ಹಾಗೂ ಪುಂಜಾಲಕಟ್ಟೆ- ಚಾರ್ಮಾಡಿ ರಸ್ತೆಯ ಬಹುತೇಕ ಕಡೆಗಳಲ್ಲಿ ರಸ್ತೆಯಲ್ಲಿ ನೀರು ನಿಂತಿರುವ ದೃಶ್ಯ ಕಂಡು ಬಂತು.
ರಸ್ತೆ ಕಾಣದೆ ವಾಹನ ಸವಾರರು ಸಂಚಾರಕ್ಕೆ ಪರದಾಡುತಾಗಿದ್ದು, ಮತ್ತೊಂದೆಡೆ ಹೆದ್ದಾರಿ ಕಾಮಗಾರಿಯ ಮೋರಿ ಕಾಮಗಾರಿ ನಡೆಯುತ್ತಿದ್ದು, ಅವುಗಳು ನೀರಿನಿಂದ ತುಂಬಿ ಹೋಗಿವೆ.
ಗುರುವಾಯನಕೆರೆ ಭಂಟರ ಭವನದ ಬಳಿ ದ್ವಿಚಕ್ರ ಸವಾರರು ಸಂಚಾರ ನಡೆಸದಷ್ಟು ನೀರು ನಿಂತಿದ್ದು, ಉಪ್ಪಿನಂಗಡಿ ರಸ್ತೆಯ ಪರಪ್ಪು ಬಳಿ ರಸ್ತೆ ಹೊಳೆಯಂತಾಗಿತ್ತು. ಹೆದ್ದಾರಿ ಬದಿ ಮಳೆ ನೀರು ಸರಾಗವಾಗಿ ಹರಿಯಲು ಸಮರ್ಪಕ ಡ್ರೈನೇಜ್ ವ್ಯವಸ್ಥೆ ಇಲ್ಲದಿರುವುದು, ಜತೆಗೆ ರಸ್ತೆ ಅಂಚಿನಲ್ಲಿ ಕಾಮಗಾರಿ ನಡೆಯುತ್ತಿರುವ ಮಣ್ಣು ಹೆದ್ದಾರಿಯಲ್ಲೇ ಇದ್ದು ಇದರ ತೆರವಿಗೆ ಇಲಾಖೆ ಮುನ್ನೆಚ್ಚರಿಕೆ ವಹಿಸದೆ ಇರುವುದರಿಂದ ಸಂಚಾರಕ್ಕೆ ಯೋಗ್ಯವಲ್ಲದ ರಸ್ತೆಯಾಗಿ ಮಾರ್ಪಟ್ಟಿದೆ.
ಮಳೆಗೆ ರಸ್ತೆಯು ಜಾರುತ್ತಿದ್ದು ದ್ವಿಚಕ್ರ ವಾಹನ ಸವಾರರು ಪರದಾಟ ನಡೆಸುವಂತಾಗಿದೆ. ರಸ್ತೆ ಅಗೆದು ಹಾಕಿರುವ ಕೆಲವು ಕಡೆಗಳಲ್ಲಿ ಒಂದು ವಾಹನ ಸಂಚರಿಸುವಷ್ಟು ಮಾತ್ರ ಜಾಗವಿದ್ದು ಭಾರಿ ಟ್ರಾಫಿಕ್ ಜಾಮ್ ಸಮಸ್ಯೆ ಕಂಡು ಬರುತ್ತಿದೆ ಇಂತಹ ಸ್ಥಳದಲ್ಲಿ ಕಾಮಗಾರಿ ನಡೆಸುವ ಅಧಿಕಾರಿಗಳು ಕಾರ್ಮಿಕರು ಇದ್ದರು ಅವರು ಸುಗಮ ವಾಹನ ಸಂಚಾರದತ್ತ ಗಮನಹರಿಸದಿರುವುದು ವಿಪರ್ಯಾಸವಾಗಿದೆ.