ರಾಜ್ಯದಲ್ಲಿ ಭಾಗ್ಯಜ್ಯೋತಿ, ಕುಟೀರ ಜ್ಯೋತಿಗೆ 18 ಯೂನಿಟ್‍ಗಳ ಮಿತಿಯಿತ್ತು. ಅದನ್ನು 40 ಯೂನಿಟ್‍ಗಳಿಗೆ ನಮ್ಮ ಸರ್ಕಾರವೇ ಹಿಂದೆ ಹೆಚ್ಚಳ ಮಾಡಿತ್ತು. ಈಗ ಗೃಹಜ್ಯೋತಿ ಬಂದ ನಂತರ ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಅಮೃತಜ್ಯೋತಿಗಳನ್ನು ಗೃಹಜ್ಯೋತಿ ಯೋಜನೆಯಡಿ ಸೇರಿಸಿ, 58 ಯೂನಿಟ್‍ವರಗೆ ಉಚಿತವಾಗಿ ವಿದ್ಯುತ್ ನೀಡಲು ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಧಾನಸೌಧದಲ್ಲಿ ಸೋಮವಾರ ನಡೆದ ಇಂಧನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ರಾಜ್ಯದಲ್ಲಿ ಈವರೆಗೆ ಭಾಗ್ಯಜ್ಯೋತಿ, ಕುಟೀರ ಜ್ಯೋತಿಗೆ 40 ಯೂನಿಟ್‍ಗಳ ಮಿತಿಯಿತ್ತು. ಅದನ್ನು ಈಗ 58 ಯೂನಿಟ್‍ವರಗೆ ಉಚಿತವಾಗಿ ನೀಡಲು ತೀರ್ಮಾನಿಸಿದೆ. ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಅಮೃತಜ್ಯೋತಿ ಯೋಜನೆಗಳಡಿ 389.66 ಕೋಟಿ ರೂ.ಗಳು ಬಾಕಿ ಉಳಿದಿದ್ದವು. ಹೀಗಾಗಿ, ಗೃಹಜ್ಯೋತಿಯಡಿ ಉಚಿತ ಕೊಡುವುದು ಕಷ್ಟವಾಗುತ್ತಿತ್ತು. ಆದ್ದರಿಂದ ಬಾಕಿ ಮೊತ್ತವನ್ನು ಒಂದು ಬಾರಿಗೆ ಮನ್ನಾ ಮಾಡಲಾಗುತ್ತಿದೆ. ಇನ್ನು ಮುಂದೆ ಬಾಕಿ ಕೊಡಬೇಕಾದ ಅಗತ್ಯವಿಲ್ಲ ಎಂದು ಹೇಳಿದರು.
ರೈತರ ಪಂಪ್‌ಸೆಟ್‌ಗಳಿಗೆ 7 ಗಂಟೆಗಳ ತ್ರಿಫೇಸ್ ವಿದ್ಯುತ್:
ರಾಜ್ಯದಲ್ಲಿ ವಿದ್ಯುತ್ ಕೊರತೆಯಿದ್ದು, ಈ ಹಿನ್ನೆಲೆಯಲ್ಲಿ ನೀರಾವರಿ ಪಂಪ್‍ಸೆಟ್‍ಗಳಿಗೆ ಏಳು ಗಂಟೆಗಳ ಕಾಲ ವಿದ್ಯುತ್ ನೀಡುವ ಘೋಷಣೆ ಮಾಡಿದ್ದೆವು. ಕೆಲವು ಜನ ಸತತವಾಗಿ ಮೂರು ಫೇಸ್‍ನಲ್ಲಿ 5 ಗಂಟೆ ವಿದ್ಯುತ್ ನೀಡಿದರೆ ಸಾಕು ಎಂದಿದ್ದರು. ಅದಕ್ಕಾಗಿ 5 ಗಂಟೆಗಳ ಕಾಲ 3 ಫೇಸ್‍ನಲ್ಲಿ ವಿದ್ಯುತ್ ನೀಡುವಂತೆ ಸೂಚನೆ ನೀಡಲಾಗಿತ್ತು. ರಾಯಚೂರು, ಕೊಪ್ಪಳ, ಬಳ್ಳಾರಿ, ಯಾದಗಿರಿ ರೈತರು ಭೇಟಿ ಮಾಡಿ ಭತ್ತ ಬೆಳೆಯುವುದರಿಂದ 5 ಗಂಟೆಗಳ ಕಾಲ ವಿದ್ಯುತ್ ನೀಡುವುದು ಸಾಕಾಗುವುದಿಲ್ಲ, 7 ಗಂಟೆಗಳ ಕಾಲ ನೀಡಬೇಕೆಂದು ಎಂದು ಮನವಿ ಮಾಡಿದರು. ಕಬ್ಬು ಹಾಗೂ ಭತ್ತ ಕಟಾವಿಗೆ ಬಂದಿರುವುದರಿಂದ ಈ ಭಾಗದಲ್ಲಿ 7 ಗಂಟೆಗಳ ಕಾಲ ವಿದ್ಯುತ್ ನೀಡುವುದು ಎಂದು ಸೂಚನೆ ನೀಡಲಾಗಿದೆ. ಉಳಿದ ಭಾಗಗಳಿಗೆ ನೀಡುತ್ತಿದ್ದ 5 ಗಂಟೆಗಳ ವಿದ್ಯುತ್ ನ್ನು 7 ಗಂಟೆಗಳ ಕಾಲ ನೀಡಲು ಸಾಧ್ಯವಿದೆ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ ಎಂದರು.
ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಪ್ರಮಾಣ 3,200 ಮೆಗಾ ವ್ಯಾಟ್‌ಗೆ ಹೆಚ್ಚಳ: ರಾಯಚೂರು, ಬಳ್ಳಾರಿಯಲ್ಲಿ ಥರ್ಮಲ್ ಘಟಕಗಳಿದ್ದು, ರಾಜ್ಯದಲ್ಲಿ ಥರ್ಮಲ್, ಜಲವಿದ್ಯುತ್, ಸೋಲಾರ್ ಮೂಲಕ ವಿದ್ಯುತ್ ಉತ್ಪಾದಿಸುತ್ತಿದ್ದೇವೆ. ಥರ್ಮಲ್ ಘಟಕವು 1,000 ಮೆಗಾ ವ್ಯಾಟ್ ಉತ್ಪಾದಿಸುತ್ತಿದೆ. ಸುಮಾರು 2,400 ರಿಂದ 3,200 ಮೆ.ವ್ಯಾ, ವಿದ್ಯುತ್ ಉತ್ಪಾದನೆ ಹೆಚ್ಚಾಗಿದೆ. ಕಬ್ಬು ಅರೆಯುವುದು ಪ್ರಾರಂಭವಾಗಿ ಕೋ-ಜನರೇಷನ್ ಆಗಿರುವುದರಿಂದ 450 ಮೆ.ವ್ಯಾಟ್ ಉತ್ಪಾದನೆಯಾಗಿದೆ. ಕೂಡ್ಲಗಿಯಲ್ಲಿ 150 ಮೆ.ವ್ಯಾ ಕರ್ನಾಟಕಕ್ಕೆ ಉಳಿತಾಯವಾಗಲಿದೆ ಹಾಗೂ ಖರೀದಿ ಮಾಡುತ್ತಿರುವುದರಿಂದ ಹೆಚ್ಚು ವಿದ್ಯುತ್ ದೊರೆಯಲಿದೆ. ಹಾಗಾಗಿ ಇಂದಿನಿಂದ 7 ತಾಸು ವಿದ್ಯುತ್‍ನ್ನು ಪಂಪ್‍ಸೆಟ್‍ಗಳಿಗೆ ನೀಡುತ್ತಿದ್ದೇವೆ. ಕೈಗಾರಿಕೆಗಳಿಗೆ, ಗೃಹಬಳಕೆಗೆ ವಿದ್ಯುತ್ ಕಡಿತ ಮಾಡಲಾಗುತ್ತಿಲ್ಲ. ಪಂಪ್‍ಸೆಟ್‍ಗಳಿಗೆ ನೀಡುವ ವಿದ್ಯುತ್ ಸಹಾಯ ಧನವನ್ನು ಸರ್ಕಾರವೇ ನೀಡಿದೆ. 13,100 ಕೋಟಿ ರೂ.ಗಳನ್ನು ಬಜೆಟ್‍ನಲ್ಲಿ ಒದಗಿಸಲಾಗಿದೆ ಎಂದು ತಿಳಿಸಿದರು.
ಶಾಲಾ, ಕಾಲೇಜುಗಳಿಗೆ ಉಚಿತ ವಿದ್ಯುತ್:
ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಜೂನಿಯರ್ ಕಾಲೇಜುಗಳಿಗೆ ನವೆಂಬರ್ 1 ರಂದು ಘೋಷಿಸಿದಂತೆ ವಿದ್ಯುತ್ ಹಾಗೂ ನೀರಿನ ವೆಚವನ್ನು ಸರ್ಕಾರವ ಭರಿಸಲಿದೆ ಎಂದು ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಮುಂದಿನ ಮುಂಗಾರಿನವರೆಗೆ ಮಳೆ ಬರುವುದಿಲ್ಲ ಎಂದು ಲೆಕ್ಕ ಹಾಕಿಯೇ ಈ ತೀರ್ಮಾನ ಮಾಡಲಾಗಿದೆ. ಜುಲೈ ಅಂತ್ಯದವರೆಗೆ ಲೆಕ್ಕ ಹಾಕಲಾಗಿದೆ. ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರಗಳನ್ನು ಚಿಟ್ ಫಂಡ್‌ಗೆ ಹೂಡಿಕೆ ಮಾಡುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಮಹಿಳೆಯರಿಗೆ ಡಿಬಿಟಿ ಮೂಲಕ ಎರಡು ಸಾವಿರ ರೂ.ಗಳು ನೀಡಲಾಗುತ್ತಿದ್ದು, ಇದನ್ನು ಮುಂದುವರೆಸಲಾಗುವುದು ಎಂದು ಭರವಸೆ ನೀಡಿದರು.
ವಿದ್ಯುತ್ ಪೂರೈಕೆಗೆ ಯುಪಿ, ಪಂಜಾಬ್‌ನೊಂದಿಗೆ ಒಡಂಬಡಿಕೆ: ವಿದ್ಯುತ್ ಖರೀದಿಯ ಮೊತ್ತವು ನಾವು ಎಷ್ಟು ವಿದ್ಯುತ್ ಖರೀದಿಸುತ್ತೇವೆ? ಎನ್ನುವುದರ ಮೇಲೆ ಅವಲಂಬಿತವಾಗಿದೆ. ಶೇ.70 ರಷ್ಟು ಥರ್ಮಲ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. 1,000 ಯೂನಿಟ್‍ವರೆಗೆ ವಿದ್ಯುತ್‍ನ್ನು ಹೊರಗಿನಿಂದ ಖರೀದಿಯಾಗುತ್ತಿದೆ. ಸ್ಥಳೀಯ ಹಾಗೂ ಆಮದು ಮಾಡಿದ ಕಲ್ಲಿದ್ದಿಲನ್ನು ಮಿಶ್ರ ಮಾಡಿ ಬಳಸುವುದರಿಂದ ವಿದ್ಯುತ್ ಉತ್ಪಾದನೆಯಾಗುತ್ತದೆ. ಉತ್ತರಪ್ರದೇಶ ಹಾಗೂ ಪಂಚಾಬ್ ನಡುವೆ ನಮ್ಮದು ವಿನಿಮಯ ಪದ್ದತಿ ಇದೆ. ಈಗ ಪಡೆದು, ಜೂನ್‍ನಿಂದ ನಾವು ಅವರಿಗೆ ಹಿಂದಿರುಗಿಸುತ್ತೇವೆ. ಯಾವುದೇ ಖಾಸಗಿಯವರಿಂದ ವಿದ್ಯುತ್ ಖರೀದಿಸಿಲ್ಲ ಎಂದು ಹೇಳಿದರು.