150 ಬಾರಿ ಕರೆ ಮಾಡಿದರೂ ಸಹ ಕರೆ ಸ್ವೀಕರಿಸದ ಪತ್ನಿಯನ್ನು ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಹತ್ಯೆ ಮಾಡಿರುವ ಘಟನೆ ಹೊಸಕೋಟೆಯಲ್ಲಿ ಜರುಗಿದೆ. ಇತ್ತೀಚೆಗಷ್ಟೇ ಮೃತ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಘಟನೆಗೆ ಪತಿಗೆ ಪತ್ನಿಯ ಮೇಲಿದ್ದ ಅನುಮಾನವೇ ಕಾರಣ ಎಂದು ಹೇಳಲಾಗಿದೆ.
ಪತ್ನಿಯ ನಡೆ ಅನುಮಾನಿಸಿದ ಪೊಲೀಸ್ ಮೊದಲಿಗೆ ಆಕೆಗೆ ಫೋನ್ ಮಾಡಿ ನಿಂದಿಸಿದ್ದ, ನಂತರ 150 ಬಾರಿ ಕರೆ ಮಾಡಿದರೂ ಪತ್ನಿ ಸ್ಪಂದಿಸದಿದ್ದಾಗ ಸುಮ್ಮನಾಗಿದ್ದ. ಆದ್ರೆ ಸೋಮವಾರ ಬೆಳಗ್ಗೆ ಚಾಮರಾಜನಗರದ ರಾಮಸಮುದ್ರದಿಂದ 230 ಕಿ.ಮೀ ಪ್ರಯಾಣಿಸಿ ಬಂದು ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದಿದ್ದಾನೆ. ಅಲ್ಲದೆ ತಾನೂ ಕ್ರಿಮಿನಾಶಕ ಸೇವಿಸಿದ್ದಾನೆ.
ಮೃತ ಪ್ರತಿಭಾ (24) 11 ದಿನಗಳ ಹಿಂದೆ ಹೊಸಕೋಟೆ ಸಮೀಪದ ಕಳತ್ತೂರು ಗ್ರಾಮದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಚಾಮರಾಜನಗರದ ಪೂರ್ವ ಪೊಲೀಸ್ ವ್ಯಾಪ್ತಿಯಲ್ಲಿನ ರಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಕಿಶೋರ್ ಡಿ (32) ಆರೋಪಿತ ಪೊಲೀಸ್ ಕಾನ್ಸ್‌ಟೇಬಲ್. ಸಧ್ಯ ಕಿಶೋರ್ ಆರೋಗ್ಯ ಸ್ಥೀತಿ ಚಿಂತಾಜನಕವಾಗಿದ್ದು, ಕೋಲಾರದ ಟಮಕದ ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಡುಗಡೆಯಾದ ನಂತರ ಕಿಶೋರ್‌ನನ್ನು ವಶಕ್ಕೆ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಬೆಟ್ಟಹಲಸೂರು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸುಬ್ರಮಣಿ ಅವರ ಕಿರಿಯ ಪುತ್ರಿ ಪ್ರತಿಭಾ ಬಿ ಇ ಕಂಪ್ಯೂಟರ್ ಸೈನ್ಸ್ ಪದವೀಧರೆ. ನವೆಂಬರ್ 13, 2022 ರಂದು ಪ್ರತಿಭಾ ಅವನ್ನು ಕಿಶೋರ್‌ಗೆ ಕೊಟ್ಟು ವಿವಾಹಮಾಡಿಕೊಡಲಾಗಿತ್ತು. ಕಿಶೋರ್ ಕೋಲಾರ ಜಿಲ್ಲೆಯ ವೀರಾಪುರದ ನಿವಾಸಿ.
ಪೊಲೀಸರ ಪ್ರಕಾರ, ಕಿಶೋರ್ ಪ್ರತಿಭಾಳನ್ನು ಅನುಮಾನಿಸುತ್ತಿದ್ದ ಮತ್ತು ಅವರ ಸಂದೇಶ ಮತ್ತು ಕರೆಯ ವಿವರಗಳನ್ನು ನಿಯಮಿತವಾಗಿ ಪರಿಶೀಲಿಸುತ್ತಿದ್ದ ಎನ್ನಲಾಗಿದೆ. ಅಲ್ಲದೆ ಅವರೊಂದಿಗೆ ಮೆಸೇಜ್ ಮಾಡುವ ಮತ್ತು ಕರೆ ಮಾಡಿ ಮಾತನಾಡುವ ಪ್ರತಿಯೊಬ್ಬ ವ್ಯಕ್ತಿಯ ಹಿನ್ನೆಲೆ ಪ್ರಶ್ನಿಸುತ್ತಿದ್ದನಂತೆ. ಪ್ರತಿಭಾ ತನ್ನ ಒಂದೆರಡು ಕಾಲೇಜು ಸ್ನೇಹಿತರೊಂದಿಗೆ ನಿಕಟವಾಗಿ ಮಾತನಾಡುತ್ತಿದ್ದಳು ಎಂದು ಆರೋಪಿಸುತ್ತಿದ್ದ ಎಂದು ಮಾಹಿತಿ ನೀಡಿದ್ದಾರೆ.
ಭಾನುವಾರ ಸಂಜೆ ಕಿಶೋರ್ ಪ್ರತಿಬಾಗೆ ಕರೆ ಮಾಡಿ ಯಾವುದೋ ಕಾರಣಕ್ಕೆ ನಿಂದಿಸಲು ಆರಂಭಿಸಿದ್ದ. ಪ್ರತಿಬಾ ಅಳುತ್ತಿದ್ದಾಗ ಆಕೆಯ ತಾಯಿ ವೆಂಕಟಲಕ್ಷ್ಮಮ್ಮ ಫೋನ್ ಕಸಿದುಕೊಂಡು ಕಾಲ್ ಡಿಸ್ಕನೆಕ್ಟ್ ಮಾಡಿದ್ದರು. ಅಳುತ್ತಲೇ ಇದ್ದರೆ ನವಜಾತ ಶಿಶುವಿನ ಆರೋಗ್ಯ ಕೆಡುತ್ತದೆ ಎಂದು ಪ್ರತಿಬಾಗೆ ಹೇಳಿದ್ದರಂತೆ. ಮರುದಿನ ಬೆಳಗ್ಗೆ ಕಿಶೋರ್ 150 ಬಾರಿ ಕರೆ ಮಾಡಿರುವುದಾಗಿ ಪ್ರತಿಭಾ ಪೋಷಕರಿಗೆ ತಿಳಿಸಿದ್ದರಂತೆ.
ಪೊಲೀಸರ ಪ್ರಕಾರ, ಸೋಮವಾರ ಬೆಳಿಗ್ಗೆ 11.30 ರ ಸುಮಾರಿಗೆ ಕಿಶೋರ್ ಪ್ರತಿಭಾ ಅವರ ಪೋಷಕರ ಮನೆಗೆ ಬಂದರು. ಮನೆಗೆ ಬರುವಾಗ ವೆಂಕಟಲಕ್ಷ್ಮಮ್ಮ ತಾರಸಿಗೆ ಹೋಗುತ್ತಿದ್ದರು. ಪ್ರತಿಬಾ ಮತ್ತು ಮಗು ಮನೆಯ ಮೊದಲ ಮಹಡಿಯಲ್ಲಿತ್ತು. ಕಿಶೋರ್ ಮೊದಲು ಕೀಟನಾಶಕ ಸೇವಿಸಿ ನಂತರ ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತಿಬಾಳನ್ನು ದುಪಟ್ಟಾದಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ವೆಂಕಟಲಕ್ಷ್ಮಮ್ಮ ಕೆಳಗಿಳಿದು ಬಾಗಿಲು ತಟ್ಟಿದರೂ ಪ್ರತಿಕ್ರಿಯೆ ಬರಲಿಲ್ಲ. ಅಪಾಯವನ್ನು ಗ್ರಹಿಸಿದ ಅವಳು ಬಡಿಯುವುದನ್ನು ಮುಂದುವರೆಸಿದಳು ಮತ್ತು ಬಾಗಿಲು ತೆರೆಯಲು ಕಿಶೋರ್‌ನನ್ನು ಕೇಳಿದಳು. 15 ನಿಮಿಷಗಳ ನಂತರ ಅವಳನ್ನು ಕೊಂದಿದ್ದು ನಾನೇ. ನಾನೇ ಕೊಂದಿದ್ದೇನೆ ಎಂದು ಸ್ಥಳದಿಂದ ಪರಾರಿಯಾಗಿದ್ದ ಎಂದು ಪ್ರತಿಭಾ ತಾಯಿ ತಿಳಿಸಿದ್ದಾರೆ.