ಹೆಂಡತಿಗೆ ಕೈಕೊಟ್ಟು ಪಕ್ಕದ ಮನೆ ಆಂಟಿ ಜೊತೆ ವಿವಾಹಿತನೊಬ್ಬ ಓಡಿಹೋಗಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಆತನ ಹೆಂಡತಿ ದಿಕ್ಕು ತೋಚದೆ, ಗಂಡನನ್ನು ಹುಡುಕಿಕೊಡಿ ಎಂದು ಪೊಲೀಸರ ಮೊರೆ ಹೋಗಿದ್ದಾಳೆ.
ಚಿತ್ರದುರ್ಗ ತಾಲೂಕಿನ ಭೀಮಸಮುದ್ರ ಗ್ರಾಮದ ಯಶವಂತ್, ಕಳೆದ 5 ವರ್ಷಗಳ ಹಿಂದೆ ಮಂಜುಳ ಎಂಬಾಕೆಯನ್ನು ಮದುವೆಯಾಗಿದ್ದ. ಆರಂಭದಿಂದಲೂ ಪತ್ನಿಯೊಂದಿಗೆ ಅನ್ಯೋನ್ಯವಾಗಿದ್ದ ಯಶವಂತ್, ಕಳೆದ 6 ತಿಂಗಳಿಂದ ಪಕ್ಕದ ಮನೆ ಆಂಟಿ ರೇಣುಕ ಜೊತೆ ಲವ್ವಿಡವ್ವಿ ಆರಂಭಿಸಿದ್ದ. ಹೀಗಾಗಿ ಪತ್ನಿ ಜೊತೆ ನಿತ್ಯ ಜಗಳ ಶುರುವಾಗಿದ್ದು, ಸದಾ ಮೊಬೈಲ್‌ನಲ್ಲೇ ಆಂಟಿ ಜೊತೆ ಬ್ಯುಸಿಯಾಗಿದ್ದ.
ಆದರೆ ಯಶವಂತ್ 28 ವರ್ಷ ಪ್ರಾಯದವನಾಗಿದ್ದು, 38 ವರ್ಷದ ಆಂಟಿಯಾದರೂ ಎಚ್ಚೆತ್ತುಕೊಂಡು ತನ್ನ ಪಾಡಿಗೆ ತಾನು ಇರೋದನ್ನು ಬಿಟ್ಟು ಆಕೆಯೊಂದಿಗೆ ಓಡಿ ಹೋಗಿದ್ದಾನೆ. ಇತ್ತ ರೇಣುಕ ಮುದ್ದಾದ ಇಬ್ಬರು ಮಕ್ಕಳು ಹಾಗೂ ಗಂಡನನ್ನು ಬಿಟ್ಟು ಯಶವಂತ್ ಜೊತೆ ಪರಾರಿಯಾಗಿದ್ದಾಳೆ. ಹೀಗಾಗಿ ಗಂಡನೇ ಸರ್ವಸ್ವ ಎಂದು ನಂಬಿ ಬಂದಿದ್ದ ಮಂಜುಳ ಈಗ ದಿಕ್ಕು ತೋಚದೇ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಗಂಡನನ್ನು ಹುಡುಕಿಕೊಡಿ ಎಂದು ದೂರು ನೀಡಿದ್ದಾಳೆ.
ಇನ್ನು ಮಗಳು-ಅಳಿಯ ಚೆನ್ನಾಗಿರಲಿ ಎಂದು ಮಂಜುಳ ಕುಟುಂಬಸ್ಥರು, ಯಶವಂತ್ ಕೇಳಿದಷ್ಟು ವರದಕ್ಷಿಣೆ ಕೊಟ್ಟು ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಆದರೆ ತಮ್ಮ ಮಗಳಿಗೆ ಮೋಸ ಮಾಡಿ, ಪಕ್ಕದ ಮನೆ ಆಂಟಿ ಜೊತೆ ಓಡಿ ಹೋಗಿರುವ ಯಶವಂತ್‌ಗೆ ಮಂಜುಳ ಅವರ ತಾಯಿ ಹಿಡಿಶಾಪಹಾಕಿದ್ದಾರೆ.