ಬೆಳ್ತಂಗಡಿ ತಾಲೂಕಿನಲ್ಲಿ ಕಾಡಾನೆಗಳ ಅಟ್ಟಹಾಸ ನಿರಂತರವಾಗಿ ಮುಂದುವರಿದಿದ್ದು, ಗುರುವಾರ ರಾತ್ರಿ ಕಲ್ಮಂಜ ಗ್ರಾಮದ ಬೆರ್ಕೆ ನಿವಾಸಿಯಾಗಿರುವ ಪ್ರಶಾಂತ್ ಕಾಕತ್ಕಾರ್ ಎಂಬವರ ತೋಟಕ್ಕೆ ನುಗ್ಗಿದ ಕಾಡಾನೆಗಳು ತೋಟದಲ್ಲಿದ್ದ ಬಾಳೆ ಗಿಡಗಳನ್ನು ಸಂಪೂರ್ಣವಾಗಿ ನಾಶಗೊಳಿಸಿವೆ.
ಎರಡು ದಿನಗಳ ಹಿಂದೆ ಕಾಡಾನೆಗಳು ಧರ್ಮಸ್ಥಳ ನೇರ್ತನೆ ಪರಿಸರದಲ್ಲಿ ವ್ಯಾಪಕವಾಗಿ ಕೃಷಿಗೆ ಹಾನಿಯುಂಟು ಮಾಡಿತ್ತು. ಮಿತ್ತಬಾಗಿಲು ಗ್ರಾಮದಲ್ಲಿಯೂ ಕಾಡಾನೆಗಳ ಹಾವಳಿಯಿಂದ ನಿರಂತರ ಕೃಷಿ ಹಾನಿಯಾಗುತ್ತಿದೆ. ತಾಲೂಕಿನ ರೆಖ್ಯದಿಂದ ಮಿತ್ತಬಾಗಿಲಿನವರೆಗೆ ಅರಣ್ಯದ ಅಂಚಿನಲ್ಲಿರುವ ಗ್ರಾಮಗಳ ಕೃಷಿಕರು ಕಾಡಾನೆ ಹಾವಳಿಯಿಂದಾಗಿ ಭಯದಲ್ಲಿಯೇ ಬದುಕು ನಡೆಸುವಂತಾಗಿದೆ.
ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ನಿಟ್ಟಿನಲ್ಲಿ ನಡೆಯುತ್ತಿರುವ ಯಾವುದೇ ಪ್ರಯತ್ನಗಳು ಯಶಸ್ವಿಯಾಗುತ್ತಿಲ್ಲ.