ಕೇರಳದ ಕಾಸರಗೋಡು ಜಿಲ್ಲೆಯ ಅನಂತಪುರದ ಅನಂತಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಸಸ್ಯಹಾರಿ ಬಬಿಯಾ ಮೊಸಳೆ ಸಾವನ್ನಪ್ಪಿದ ಒಂದು ವರ್ಷ ಒಂದು ತಿಂಗಳ ಬಳಿಕ ಮತ್ತೊಂದು ಮೊಸಳೆ ಪ್ರತ್ಯಕ್ಷಗೊಂಡಿದೆ. ಇದು ಭಕ್ತರಲ್ಲಿ ಅಚ್ಚರಿಗೆ ಕಾರಣವಾಗಿದೆ.
ಕುಂಬಳೆ ಸಮೀಪದ ಅನಂತಪುರ ಅನಂತಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಬ್ರಿಟೀಷರ ಗುಂಡೇಟಿಗೆ ಬಲಿಯಾಗಿದ್ದ ಮೊಸಳೆ ಬಳಿಕ ಮತ್ತೊಂದು ಮೊಸಳೆ ಪ್ರತ್ಯಕ್ಷಗೊಂಡಿತ್ತು. ದೇವಸ್ಥಾನದ ಕಲ್ಯಾಣಿಯಲ್ಲಿ ದೇವಮೊಸಳೆ ಅಂತಾನೆ ಇತಿಹಾಸ ಹೊಂದಿದ್ದ ಈ ಬಬಿಯಾ ಎನ್ನುವ ಮೊಸಳೆ 75 ವರ್ಷಗಳ ಕಾಲ ಪೂಜಿಸಲ್ಪಟ್ಟಿತ್ತು. ಆದರೆ, 2022 ರ ಅಕ್ಟೋಬರ್ 9 ರಂದು ಇದು ಮೃತಪಟ್ಟಿತ್ತು.
ಬಬಿಯಾ ಮೃತಪಟ್ಟು ಒಂದು ವರ್ಷ ಒಂದು ತಿಂಗಳ ಬಳಿಕ ಸದೃಢ ಮೊಸಳೆಯೊಂದು ಪ್ರತ್ಯಕ್ಷವಾಗಿದೆ. ಇದು ಭಕ್ತರಲ್ಲಿ ಭಾರೀ ಅಚ್ಚರಿಗೆ ಕಾರಣವಾಗಿದೆ.
ಬಬಿಯಾ ಮೊಸಳೆ
ಹಲವಾರು ದೇವಸ್ಥಾನಗಳಲ್ಲಿ ಆನೆ, ಬಸವ, ಇತ್ಯಾದಿ ಪ್ರಾಣಿಗಳು ದೇವರ ಪ್ರಾಣಿಗಳಾಗಿರುತ್ತವೆ. ಆದರೆ ಅನಂತಪದ್ಮನಾಭ ದೇವಸ್ಥಾನದಲ್ಲಿ ಮೊಸಳೆ ದೇವರ ಮೊಸಳೆಯಾಗಿದೆ. ಕ್ಷೇತ್ರದ ಕೆರೆಯಲ್ಲಿ ನೀರಿನ ಮಧ್ಯೆಯೇ ಇದ್ದುಕೊಂಡಿದ್ದ ಬಬಿಯಾ ಮೊಸಳೆಗೆ ಪ್ರತಿನಿತ್ಯ ಪೂಜೆಯ ಬಳಿಕ ನೈವೇದ್ಯ ಅರ್ಪಿಸಲಾಗುತ್ತಿತ್ತು. ಈ ನೈವೇದ್ಯವೇ ಮೊಸಳೆಯ ಆಹಾರವಾಗಿತ್ತು. ಈ ಮೊಸಳೆಯು ಯಾರಿಗೂ ತೊಂದರೆ, ನೋವು ಉಂಟು ಮಾಡಿಲ್ಲ.
ಈ ಮೊಸಳೆಯು ಹೆಚ್ಚಿನ ಸಮಯವನ್ನು ದೇವಸ್ಥಾನದ ಎಡ ಭಾಗದಲ್ಲಿರುವ ಗುಹೆಯಲ್ಲಿ ನೆಲೆಸುತ್ತಿತ್ತು. ಮಧ್ಯಾಹ್ನದ ಪೂಜೆಯ ನಂತರ ನೈವೇದ್ಯ ಇಟ್ಟು ಮೊಸಳೆಯನ್ನು ಕರೆಯಲಾಗುತ್ತಿತ್ತು. ಹೀಗೆ 75 ವರ್ಷಗಳ ಕಾಲ ಪೂಜಿಸಲ್ಪಟ್ಟಿದ್ದ ಬಬಿಯಾ ಮೊಸಳೆ ಕಳೆದ ವರ್ಷ ಮೃತಪಟ್ಟಿತ್ತು.