ಉಜಿರೆ: ಹೆಚ್ಚು ಪ್ರಚಲಿತವಿರುವ ಹಾಗೆಯೇ ಅತಿ ಹೆಚ್ಚಿನ ಭಾಷೆಗಳಿಗೆ ಅನುವಾದ ಕೃತಿ ಇದ್ದರೆ ಅದು ಭಗವದ್ಗೀತೆ. ಇದು ವೇದೋಪನಿಷತ್ತುಗಳ ಸಾರ. ಐಟಿ ಬಿಟಿ , ವೈದ್ಯಕೀಯ ಇತ್ಯಾದಿ ಕ್ಷೇತ್ರದ ಪರಿಣಿತರಿಗೆ ಭಗವದ್ಗೀತೆ ಆಧಾರವಾಗಿದೆ. ಇಂದಿಗೂ ಮುಂದಿಗೂ ಇದು ಪ್ರಸ್ತುತವೇ ಆಗಿರುತ್ತದೆ. ಚಂಚಲ ಮನಸ್ಸಿನವರಿಗೆ ಇದೊಂದು ದಿವೌಷಧ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ವಿದ್ಯಾಲಯದ ಯೋಗ ವಿಭಾಗದ ಸಹಾಯಕ ಪ್ರಾಧ್ಯಾಪಕ ಉದಯಸುಬ್ರಹ್ಮಣ್ಯ ಹೇಳಿದರು.
ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಸಂಸ್ಕೃತ ಸಂಘ ಹಾಗೂ ಸಂಸ್ಕೃತ ಅಂತರಾಧ್ಯಯನ ವೃತ್ತಮ್ ಸಹಯೋಗದಲ್ಲಿ ನಡೆದ ಗೀತಾ ಜಯಂತಿ , ವಾರ್ಷಿಕ ಚಟುವಟಿಕೆಗಳ ಸಮಾರೋಪ ಹಾಗೆಯೇ ದಿ. ಕೋಟೇಶ್ವರ ಕೃಷ್ಣ ಐತಾಳ್ ಸ್ಮಾರಕ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾವು ಪ್ರತಿ ದಿನ ಭಗವದ್ಗೀತೆಯ ಅನುಸಂಧಾನ ಮಾಡಬೇಕೆಂದು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಉಪ ಪ್ರಾಚಾರ್ಯರ ಡಾ. ರಾಜೇಶ್ ಬಿ ಅವರು ಮಾತನಾಡಿ ಸಂಸ್ಕೃತಿ, ಸಂಸ್ಕಾರಕ್ಕೆ ಸಂಸ್ಕೃತ ಭಾಷೆ ಅತಿ ಅಗತ್ಯ. ಅದರಲ್ಲಿ ಇರುವ ಭಗವದ್ಗೀತೆಯಂತಹ ಗ್ರಂಥಗಳು ಒಳ್ಳೆಯ ಬದುಕಿಗೆ ನಾಂದಿ ಎಂದು ಹೇಳಿದರು.
ಸಂಸ್ಕೃತ ಭಾಷಾ ವಿದ್ಯಾರ್ಥಿಗಳಾದ ರುಕ್ಮವ್ವ, ರಾಜೇಂದ್ರ ಆಚಾರ್ಯ ಹಾಗೂ ರಕ್ಷಿತ್ ಇವರಿಗೆ ದಿ. ಕೃಷ್ಣ ಐತಾಳ್ ಸ್ಮಾರಕ ವಿದ್ಯಾರ್ಥಿ ವೇತನ ನೀಡಲಾಯಿತು. ರಾಜ್ಯಮಟ್ಟದ ಭಗವದ್ಗೀತಾ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದ ಅದಿತಿ ಹಾಗೂ ಸುಮೇಧಾ ಅವರನ್ನು ಗೌರವಿಸಲಾಯಿತು. ಕಾಲೇಜಿನಲ್ಲಿ ನಡೆದ ಕಂಠಪಾಠ ಹಾಗೂ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಅದಿತಿ, ವಂದಿತಾ ರಾವ್, ಮಯೂರ ಹಾಗೂ ಸುಮೇಧಾ ಅವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಡಾ.ಪ್ರಸನ್ನಕುಮಾರ ಐತಾಳ್ ಗೌರವಿಸಿದರು . ವಿದ್ಯಾರ್ಥಿಗಳಿಂದ ಸಂಸ್ಕೃತ ಸಮೂಹ ಗಾಯನ ಕಾರ್ಯಕ್ರಮ ನಡೆಯಿತು. ಸಂಸ್ಕೃತ ಅಂತರಾಧ್ಯಯನ ವೃತ್ತಮ್ ಸಂಯೋಜಕಿ ಅಂಜಲಿ ಸ್ವಾಗತಿಸಿದರು. ಸಂಸ್ಕೃತ ಸಂಘದ ಅಧ್ಯಕ್ಷ ಆದಿತ್ಯ ಹೆಗಡೆ ನಿರೂಪಿಸಿ, ಬಿಂದುಶ್ರೀ ವಂದಿಸಿದರು.