ಕಡಬ: ಬೇಸಿಗೆ ಶಿಬಿರಗಳು ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಹೆಚ್ಚು ಸಹಕಾರಿ, ಈ ನಿಟ್ಟಿನಲ್ಲಿ ಎಲ್ಲಾ ಮಕ್ಕಳು ಬೇಸಿಗೆ ಶಿಬಿರದ ಸದುಪಯೋಗ ಪಡಿಸಿಕೊಳ್ಳುವಂತೆ ಜೆಸಿಐ ವಲಯ ಸಂಯೋಜಕ ಲೋಕೇಶ್ ಅಗ್ರಿಕಟ್ಟೆ ಮನವಿ ಮಾಡಿದರು ಜೆಸಿಐ ಕಡಬ ಕದಂಬ ಆಶ್ರಯದಲ್ಲಿ ಕಡಬದ ಐಐಸಿಟಿ ಎಜುಕೇಶನ್ ಸೆಂಟರ್ ನಲ್ಲಿ ಎ.10 ರಿಂದ 16ರ ವರೆಗೆ ಆಯೋಜಿಸಲಾಗಿದ ಮಕ್ಕಳ ಮೋಜಿನ ಬೇಸಿಗೆ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅವರು, ರಜೆ ವೇಳೆ ಮಕ್ಕಳು ಕೇವಲ ಮೊಬೈಲ್ ಮತ್ತು ಇನ್ನಿತರ ಯಾಂತ್ರಿಕ ಯುಗಕ್ಕೆ ಮಾರುಹೋಗದೆ ಇಂತಹ ಶಿಬಿರಗಳಿಂದ ಹೆಚ್ಚು ಹೆಚ್ಚು ಕಲಿಯಲು ಅವರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಕಡಬ ಪತ್ರಕರ್ತ ಸಂಘದ ಹಾಗೂ ಜೆಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್(ರಿ.)ಅಧ್ಯಕ್ಷ ನಾಗರಾಜ್.ಎನ್.ಕೆ., ಪ್ರಸ್ತಾವಿಕವಾಗಿ ಮಾತನಾಡಿ ವರ್ಷಪೂರ್ತಿ ಪಠ್ಯ ಚಟುವಟಿಕೆಗಳಲ್ಲಿ ಪಾಲ್ಗೊಂಡು ಮಾನಸಿಕ ಒತ್ತಡ ಅನುಭವಿಸುತ್ತಿರುವ ಮಕ್ಕಳಿಗೆ, ಬೇಸಿಗೆ ಶಿಬಿರ ಸಹಕಾರಿಯಾಗಿವೆ, ಇತ್ತೀಚಿನ ದಿನಗಳಲ್ಲಿ ಅಂಕ ಆಧರಿತ ಪಠ್ಯಕ್ಕೆ ಹೆಚ್ಚು ಹೊತ್ತು ನೀಡಲಾಗುತ್ತಿದ್ದು ಮಕ್ಕಳಿಗೆ ಅದರ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿಕೆ ತುಂಬಾ ಅಗತ್ಯವಿದೆ ಎಂದರು.
ಜೆಸಿಐ ಕಡಬ ಕದಂಬ ಅಧ್ಯಕ್ಷ ಜಾಫಿರ್ ಮಹಮದ್ ಅಧ್ಯಕ್ಷತೆಯನ್ನು ವಹಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.
ವೇದಿಕೆಯಲ್ಲಿ ಕಡಬ ಯುವಜನ ಒಕ್ಕೂಟದ ಅಧ್ಯಕ್ಷ ಶಿವಪ್ರಸಾದ್ ಮೈಲೇರಿ, ಜೇಸಿಐ ನ ವಲಯ ಉಪಾಧ್ಯಕ್ಷ ಅಭಿಷೇಕ್ ಜಿ.ಎಂ, ಐಐಸಿಟಿ ಎಜುಕೇಶನ್ ಸೆಂಟರ್ ನಿರ್ದೇಶಕ ಪ್ರಶಾಂತ್ ಸಿ.ಎಚ್. ಉಪಸ್ಥಿತರಿದ್ದರು.
ಜೇಸಿ ಕಾರ್ಯದರ್ಶಿ ಜೇಮ್ಸ್ ಕ್ರಿಶಲ್ ಡಿ’ಸೋಜ ವಂದಿಸಿದರು.