ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳದಲ್ಲಿ ಸುಧೀರ್ಘ ಕಾಲ ಸೇವೆ ಸಲ್ಲಿಸಿದ ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ 59 ವರ್ಷ ವಯಸ್ಸಾಗಿತ್ತು.
ಮೇ.1ರಂದು ಕೋಟದಲ್ಲಿ ನಡೆಯುತ್ತಿದ್ದ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಯಕ್ಷಗಾನದಲ್ಲಿ ಕುಕ್ಕಿತ್ತಾಯನ ವೇಷ ಧರಿಸಿದ್ದ ಗಂಗಾಧರ ಪುತ್ತೂರು ಅವರು ರಾತ್ರಿ 12.25 ರ ಸುಮಾರಿಗೆ ಚೌಕಿಯಲ್ಲಿ ಬಣ್ಣ ತೆಗೆಯುತ್ತಿದ್ದ ವೇಳೆ ಹೃದಯಾಘಾತಕ್ಕೆ ಒಳಗಾಗಿ ನಿಧನರಾಗಿದ್ದಾರೆ ಎನ್ನಲಾಗಿದೆ.
ನಾರಾಯಣ ಮಯ್ಯ ಹಾಗೂ ಲಕ್ಷ್ಮಿ ದಂಪತಿಯ ಪುತ್ರನಾಗಿ ಪುತ್ತೂರು ತಾಲೂಕಿನ ಸೇಡಿಯಾಪುವಿನಲ್ಲಿ 1964 ರಲ್ಲಿ ಗಂಗಾಧರ ಪುತ್ತೂರು ಜನಿಸಿದರು. ತನ್ನ ಹದಿನೆಂಟನೇ ವಯಸ್ಸಿಗೆ ಮೇಳ ತಿರುಗಾಟ ಆರಂಭಿಸಿದ ಅವರು ಸ್ತ್ರೀ ವೇಷ, ರಾಜ ವೇಷ, ಪುಂಡು ವೇಷಗಳನ್ನು ನಿರ್ವಹಿಸುವುವಲ್ಲಿ ಎತ್ತಿದ ಕೈಯಾಗಿದ್ದರು. ಇಷ್ಟು ಮಾತ್ರವಲ್ಲದೆ ಮಾಲಿನಿ, ಚಿತ್ರಾಂಗದೆ, ಮೋಹಿನಿ, ದಾಕ್ಷಾಯಿಣಿ, ಪ್ರಮೀಳೆ, ಶ್ರೀದೇವಿ, ಸೀತೆ, ದೇವೇಂದ್ರ, ದುಶ್ಯಾಸನ ಮೊದಲ ಪಾತ್ರಗಳಲ್ಲಿ ಸೈ ಎನಿಸಿಕೊಂಡ ಕಲಾವಿದ ಇವರಾಗಿದ್ದರು.