ನೆಲ್ಯಾಡಿ: ತರಕಾರಿ ಸಾಗಾಟ ಮಾಡುತ್ತಿದ್ದ ಈಚರ್ ಲಾರಿಯೊಂದು ಪಲ್ಟಿಯಾದ ಘಟನೆ ಮೇ.20ರಂದು ಮುಂಜಾನೆ ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪದ ಕೌಕ್ರಾಡಿ ಗ್ರಾಮದ ಪೆರಿಯಶಾಂತಿಯಲ್ಲಿ ಸಂಭವಿಸಿದೆ.
ಘಟನೆಯಲ್ಲಿ ಈಚರ್ ಚಾಲಕ ಹಾಗೂ ನಿರ್ವಾಹಕ ಗಾಯಗೊಂಡಿದ್ದಾರೆ. ಬೆಂಗಳೂರಿನಿಂದ ಉಡುಪಿಗೆ ಈಚರ್ ಲಾರಿಯಲ್ಲಿ ತರಕಾರಿ ಸಾಗಾಟ ಮಾಡಲಾಗುತ್ತಿತ್ತು. ಪೆರಿಯಶಾಂತಿ ತಲುಪುತ್ತಿದ್ದಂತೆ ಲಾರಿ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಘಟನೆಯಲ್ಲಿ ನಿರ್ವಾಹಕ ವಿಶ್ವ ಎಂಬವರಿಗೆ ಗಂಭೀರ ಗಾಯವಾಗಿದ್ದು ಚಿಕಿತ್ಸೆಗಾಗಿ ಹಾಸನ ಆಸ್ಪತ್ರೆ ಕರೆದೊಯ್ಯಲಾಗಿದೆ. ಚಾಲಕ ಲೋಕೇಶ್‌ಗೆ ಅಲ್ಪಸ್ವಲ್ಪ ಗಾಯವಾಗಿರುವುದಾಗಿ ವರದಿಯಾಗಿದೆ.
ನೆಲ್ಯಾಡಿ ಹೊರಠಾಣೆ ಹೆಡ್‌ಕಾನ್‌ಸ್ಟೇಬಲ್ ಕುಶಾಲಪ್ಪ ನಾಯ್ಕ್, ಸಿಬ್ಬಂದಿ ನಾಗರಾಜ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಪಾಯಕಾರಿ ಹೆದ್ದಾರಿ:
ಅಡ್ಡಹೊಳೆಯಿಂದ ಬಿ.ಸಿ.ರೋಡ್ ತನಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ಈ ಹಿಂದೆ ಪೆರಿಯಶಾಂತಿಯಲ್ಲಿ ಹೆದ್ದಾರಿಗಾಗಿ ರಸ್ತೆ ಬದಿ ಅಗೆಯಲಾಗಿತ್ತು. ಆ ಬಳಿಕ ಗುತ್ತಿಗೆದಾರರ ಬದಲಾವಣೆಯಾಗುತ್ತಿದ್ದಂತೆ ಸದ್ರಿ ಹೊಂಡಕ್ಕೆ ಕೆಲವು ಕಡೆ ಮಣ್ಣು ತುಂಬಿಸಲಾಗಿದೆ. ಇನ್ನು ಕೆಲವು ಕಡೆ ಹೊಂಡಗಳು ಹಾಗೆ ಇದ್ದು ಈ ಹೊಂಡಗಳಿಗೆ ಅನೇಕ ಬಾರಿ ವಾಹನಗಳು ಬೀಳುವುದು ಸರ್ವೆಸಾಮಾನ್ಯವಾಗಿದೆ. ರಸ್ತೆಯ ಬದಿಯಲ್ಲಿ ಯಾವುದೇ ತಡೆಗೋಡೆಯನ್ನು ಇಡದೆ ಗುತ್ತಿಗೆದಾರರ ನಿರ್ಲಕ್ಷ ಎದ್ದು ಕಾಣುತ್ತದೆ. ಇದೀಗ ಮಳೆ ನೀರಿನ ಜೊತೆಗೆ ಮಣ್ಣು ಸಹ ರಸ್ತೆಗೆ ಹರಿದು ಬರಲಾರಂಭಿಸಿದ್ದು ರಸ್ತೆ ಸಂಪೂರ್ಣ ಕೆಸರುಮಯವಾಗಿದೆ. ಪೆರಿಯಶಾಂತಿಯಿಂದ ನೆಲ್ಯಾಡಿ ತನಕವೂ ಇದೇ ಪರಿಸ್ಥಿತಿ ಇದ್ದು ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸುತ್ತಿದೆ. ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಯೂ ನಿಧಾನವಾಗಿ ಸಾಗುತ್ತಿದ್ದು ಮಳೆಗಾಲದಲ್ಲಿ ಮತ್ತಷ್ಟೂ ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ.