
ನೇಸರ ಫೆ.14: ರಾಜ್ಯಾದ್ಯಂತ 1ರಿಂದ 9ನೇ ತರಗತಿ ಪರೀಕ್ಷೆಗೆ ವೇಳಾಪಟ್ಟಿ ತೊಡಕು ಎದುರಾಗಿದ್ದು, ವಿಳಂಬವಾದರೆ ಮಕ್ಕಳ ವಾರ್ಷಿಕ ರಜೆಗೆ ಕತ್ತರಿ ಬೀಳುವ ಸಾಧ್ಯತೆಯಿದೆ!
ಸಾಮಾನ್ಯವಾಗಿ ಮಾ. 30ರೊಳಗೆ 1ರಿಂದ 9ನೇ ತರಗತಿ ಪರೀಕ್ಷೆ ನಡೆದು, ಬಳಿಕ ಎಸೆಸೆಲ್ಸಿ ಪರೀಕ್ಷೆ ನಡೆಯುತ್ತಿತ್ತು. ಎ. 10ರ ಅನಂತರ ರಜೆ. ಆದರೆ ಈ ಬಾರಿ 1ರಿಂದ 9ನೇ ತರಗತಿಗೆ ಎ. 20ರೊಳಗೆ ಪರೀಕ್ಷೆ ಮುಗಿಸಲು ತಿಳಿಸಲಾಗಿದೆ. ಎಸೆಸೆಲ್ಸಿ ಪರೀಕ್ಷೆ ಇದಕ್ಕೆ ಸಮಸ್ಯೆ ಏನು?
ಹೆಚ್ಚಿನ ಶಾಲೆಗಳಲ್ಲಿ ಎಸೆಸೆಲ್ಸಿ ಪರೀಕ್ಷೆ ವೇಳೆ 1ರಿಂದ 9ರ ಮಕ್ಕಳಿಗೆ ರಜೆ ನೀಡಬೇಕಾಗುತ್ತದೆ. ಹೀಗಾಗಿ 12 ದಿನ ರಜೆ ನೀಡಿ ಆ ಬಳಿಕ 1-9ರ ಪರೀಕ್ಷೆ ನಡೆಸುವುದು ಸೂಕ್ತವಲ್ಲ. ಜತೆಗೆ ಎಸೆಸೆಲ್ಸಿ ಪರೀಕ್ಷೆ ಆದ ಕೂಡಲೇ ಮೌಲ್ಯಮಾಪನ ಇದ್ದು, ಶಿಕ್ಷಕರ ಕೊರತೆ ಎದುರಾಗಲಿದೆ. ಹೀಗಾಗಿ 1-9 ಪರೀಕ್ಷೆಗೆ ತೊಡಕಾಗಲಿದೆ. ಜತೆಗೆ ಎ. 11ರ ಅನಂತರ 1-9 ಪರೀಕ್ಷೆ ನಡೆಸಿದರೆ ಮಕ್ಕಳ ವಾರ್ಷಿಕ ರಜೆಗೆ ಕತ್ತರಿ ಬೀಳುವ ಸಾಧ್ಯತೆ ಅಧಿಕ.
ಎಸೆಸೆಲ್ಸಿ ಪರೀಕ್ಷೆ ವೇಳೆ ಶಿಕ್ಷಕರಿಗೆ ಹೆಚ್ಚುವರಿ ಹೊಣೆ ಕಾರಣ 1-9 ಮಕ್ಕಳು ಶಾಲೆಗೆ ಬರುವಂತಿಲ್ಲ. ಜತೆಗೆ ಶೇ.50ರಷ್ಟು ಶಾಲೆಗಳು ಎಸೆಸೆಲ್ಸಿ ಕೇಂದ್ರಗಳಾಗಿರುತ್ತವೆ.
1-9ರ ಪರೀಕ್ಷೆಗೂ ಮುನ್ನ ಎಸೆಸೆಲ್ಸಿ ಪರೀಕ್ಷೆ ನಡೆಯುವುದರಿಂದ ಈ ಗೊಂದಲ ಸೃಷ್ಟಿಯಾಗಿದೆ. ಇನ್ನೂ ಒಂದೂವರೆ ತಿಂಗಳು ಇದ್ದು, 1-9 ಪರೀಕ್ಷೆಯ ವೇಳಾಪಟ್ಟಿ ಬದಲಾಯಿಸುವುದು ಸೂಕ್ತ ಎಂಬ ಅಭಿಪ್ರಾಯ ಶಿಕ್ಷಕ ವಲಯದಿಂದ ಕೇಳಿಬಂದಿದೆ.
ಎರಡು ವರ್ಷ ಕೊರೊನಾ ಕಾರಣ ಶೈಕ್ಷಣಿಕ ಅವಧಿಯಲ್ಲಿ ವ್ಯತ್ಯಾಸವಾಗಿತ್ತು. ಪ್ರಸಕ್ತ ವರ್ಷದ ಶೈಕ್ಷಣಿಕ ಅವಧಿ ಜೂ. 15ರಿಂದ ಆನ್‌ಲೈನ್ ಮೂಲಕ ಆರಂಭವಾಗಿ ಬಳಿಕ ಭೌತಿಕ ತರಗತಿ ಕೂಡ ನಡೆದಿದೆ. ಹೀಗಾಗಿ ಪಠ್ಯ ಬೋಧನೆ ಸಮಸ್ಯೆ ಆಗಿಲ್ಲ. ಇದರಿಂದ ಪರೀಕ್ಷೆ ಬೇಗ ಮುಗಿಸಬೇಕು ಎಂಬ ಅಭಿಪ್ರಾಯ ಕೇಳಿಬಂದಿದೆ.
ವಾರ್ಷಿಕ ರಜೆಗೆ ಕತ್ತರಿ..!!
ಕೊರೊನಾ ಬರುವ ಮುನ್ನ ಎ. 10ರಿಂದ ಮೇ 30ರ ವರೆಗೆ ಮಕ್ಕಳಿಗೆ ರಜೆ ಇತ್ತು. ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಮತ್ತು ಮಾನಸಿಕ ಸಿದ್ಧತೆಗಾಗಿ ಈ ರಜೆಯನ್ನು ನಿಗದಿಪಡಿಸಲಾಗಿದೆ. 1ರಿಂದ 5ನೇ ತರಗತಿಗೆ 200 ಶಾಲಾ ದಿನ ಮತ್ತು 5ರ ಮೇಲ್ಪಟ್ಟವರಿಗೆ 220 ದಿನಗಳ ಲೆಕ್ಕಾಚಾರವಿದೆ. ಆದರೆ ಬೇರೆ ಎಲ್ಲೂ ಇಲ್ಲದೆ ಕರ್ನಾಟಕದಲ್ಲಿ ಮಾತ್ರ 240 ದಿನಗಳ ಶೈಕ್ಷಣಿಕ ಅವಧಿ ಇಡಲಾಗಿದೆ. ಹೀಗಾಗಿ ಎ. 30ರ ವರೆಗೆ ರಾಜ್ಯದಲ್ಲಿ ಶೈಕ್ಷಣಿಕ ಅವಧಿ ತೋರಿಸಲಾಗಿದೆ. ಇದರಿಂದಾಗಿ 50 ದಿನ ರಜೆ ಪಡೆಯುತ್ತಿದ್ದ ಮಕ್ಕಳಿಗೆ ಈ ಬಾರಿ 30 ದಿನ ಮಾತ್ರ (ಮೇ ತಿಂಗಳು) ರಜೆ ಎಂದು ತಿಳಿಸಲಾಗಿದೆ. ಹಲವು ವರ್ಷಗಳ ಹಿಂದೆ ದಸರಾ ರಜೆ 20 ದಿನ ಇತ್ತು. ಈ ಬಾರಿ 10 ದಿನ ರಜೆ ನೀಡಿದ್ದರೂ ಸಿಕ್ಕಿದ್ದು ನಾಲ್ಕು ದಿನ ಮಾತ್ರ.
1ರಿಂದ 9ನೇ ತರಗತಿ ಮಕ್ಕಳಿಗೆ ಪರೀಕ್ಷೆಯನ್ನು ಎಸೆಸೆಲ್ಸಿ ಪರೀಕ್ಷೆಗೆ ಮುನ್ನ ನಡೆಸುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಈ ಬಗ್ಗೆ ಸರಕಾರ ತೀರ್ಮಾನ ಕೈಗೊಳ್ಳಲಿದೆ. ಸರಕಾರದ ಸೂಚನೆಯ ಪ್ರಕಾರ ಪರೀಕ್ಷೆ.
—ಜಾಹೀರಾತು—



