ಗ್ರಾಮೀಣ ಪ್ರದೇಶದ ಮಕ್ಕಳ ಕನಸು ನನಸಾಗಿಸಲು ಕೆಲಸ ಮಾಡುತ್ತಿದ್ದೇನೆ – ಶ್ರೀ ಮೋಹನ್ ಕುಮಾರ್

ಶೇರ್ ಮಾಡಿ

ಉಜಿರೆ:”ನಾನು ವಿದ್ಯೆ ಕಲಿಯಲು ಸೌಲಭ್ಯ, ಅವಕಾಶ ಇರಲಿಲ್ಲ ಹಾಗಾಗಿ ಪ್ರತಿಭಾನ್ವಿತ ಅರ್ಹ ವಿದ್ಯಾರ್ಥಿಗಳು ವಿದ್ಯೆ ಕಲಿಯಬೇಕು, ಅವರ ಕನಸು ನನಸಾಗಿಸಲು ಶ್ರಮವಹಿಸುತ್ತಿದ್ದೇನೆ. ಮತ್ತು ಇದರಿಂದ ಸಾರ್ಥಕತೆ ನನ್ನ ಪಾಲಾಗಿದೆ” ಎಂದು ‘ಬದುಕು ಕಟ್ಟೋಣ ಬನ್ನಿ’ ತಂಡದ ಸಂಚಾಲಕರಾದ ಮೋಹನ್ ಕುಮಾರ್ ಹೇಳಿದರು. ಉಜಿರೆಯ ಓಷ್ಯನ್ ಪರ್ಲ್ ನ ಸಭಾಂಗಣದಲ್ಲಿ ಎಸ್.ಡಿ.ಎಂ.ಕಾಲೇಜಿನ ಎನ್.ಎಸ್.ಎಸ್.ಘಟಕದ ಸಹಯೋಗದೊಂದಿಗೆ ಬದುಕು ಕಟ್ಟೋಣ ಬನ್ನಿ ತಂಡ ಆಯೋಜಿಸಿದ ‘ಕನಸು ಇದು ಭರವಸೆಯ ಬೆಳಕು’ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡುತ್ತಿದ್ದರು.

‘ಬದುಕು ಕಟ್ಟೋಣ ಬನ್ನಿ’ ಸಂಸ್ಥೆ ಪ್ರಾರಂಭವಾದ ನಂತರದ ಯಶಸ್ವಿ ಸೇವೆಗಳು, ಫಲಶೃತಿ ಮತ್ತು ಅನೇಕ ಕಾರ್ಯಕ್ರಮಗಳ ಕುರಿತು ವಿಡಿಯೋ ತುಣುಕುಗಳನ್ನು ಪ್ರದರ್ಶಿಸಿದ ನಂತರ ಮಾತನಾಡಿದ ಮೋಹನ್ ಕುಮಾರ್ “ಕನ್ನಡ ಶಾಲೆಯ ಅಭಿವೃದ್ಧಿಗಾಗಿ ಆರಂಭಿಸಿದ ಕೆಲಸ ಬಹಳ ಯಶಸ್ವಿಯಾಗಿದೆ. ವಿದ್ಯೆ ಕಲಿಯದಿದ್ದರೂ ಸಮಾಜಕ್ಕೆ ಮಾದರಿ ಆಗಬೇಕು ಎನ್ನುವ ನನ್ನ ಕನಸು ನನಸಾಗಿದೆ. ಈಗ ಮಕ್ಕಳ ಕನಸನ್ನು ನನಸಾಗಿಸುವ ಹಾದಿಯಲ್ಲಿ ನಾನಿದ್ದೇನೆ.” ಎಂದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಎಸ್ ಡಿ.ಎಂ.ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ. ಎ.ಕುಮಾರ ಹೆಗ್ಡೆ ಮಾತನಾಡಿ “ಎಷ್ಟೋ ಜನರ ಬಾಳಿಗೆ ಮೋಹನ್ ಕುಮಾರ್ ಆಶಾಕಿರಣವಾಗಿದ್ದಾರೆ.ಮಾನವೀಯತೆಯನ್ನು ಮರೆಯುತ್ತಿರುವ ಈ ಸಮಾಜದಲ್ಲಿ, ಸ್ಫೂರ್ತಿಯ ಬದುಕು ಇವರದ್ದಾಗಿದೆ. ಉನ್ನತ ಸಮಾಜವನ್ನು ಕಟ್ಟುವಲ್ಲಿ ಬದುಕು ಕಟ್ಟೋಣ ಬನ್ನಿ ತಂಡದ ಕೆಲಸ ಪ್ರಶಂಸನೀಯ” ಎಂದು ಶುಭನುಡಿಗಳನ್ನಾಡಿದರು.

ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿಗಳಾದ ಡಾ.ಮಹೇಶ್ ಕುಮಾರ್ ಶೆಟ್ಟಿ ಹೆಚ್. ಬದುಕು ಕಟ್ಟೋಣ ಬನ್ನಿ ತಂಡದಿಂದ ಕೊಡಲ್ಪಟ್ಟ ವಿದ್ಯಾರ್ಥಿ ನಿಧಿಗೆ ಅರ್ಹರಾದ ಸ್ವಯಂಸೇವಕರ ಹೆಸರನ್ನು ವಾಚಿಸಿದರು. ಸಂಧ್ಯಾ ಟ್ರೇಡರ್ಸ್ ನ ಮಾಲೀಕರು ರಾಜೇಶ್ ಪೈ. ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಎನ್.ಎಸ್.ಎಸ್.ನ ಹಿರಿಯ ಯೋಜನಾಧಿಕಾರಿಯಾದ ಡಾ.ಲಕ್ಷ್ಮೀನಾರಾಯಣ ಕೆ.ಎಸ್., ಯೋಜನಾಧಿಕಾರಿ ಪ್ರೊ.ದೀಪಾ ಆರ್. ಪಿ., ಆರ್.ಎಂ.ಅರ್ಥ್ ಮೂವರ್ಸ್, ಉಜಿರೆಯ ಮಾಲಕರಾದ ರವಿ ಚಕ್ಕಿತ್ತಾಯ ಮತ್ತು ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್.ಸ್ವಯಂಸೇವಕರು ಉಪಸ್ಥಿತರಿದ್ದರು. ಸಮೀಕ್ಷಾ ಶಿರ್ಲಾಲು ಕಾರ್ಯಕ್ರಮ ನಿರೂಪಿಸಿದರು.

Leave a Reply

error: Content is protected !!