ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಕಳೆದ ಕೆಲವು ದಿನಗಳಿಂದ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದೀಗ ಕಾಂಬ್ಳಿ ಅವರ ಆರೋಗ್ಯ ಮತ್ತೊಮ್ಮೆ ಹದಗೆಟ್ಟಿದ್ದು ಅವರನ್ನು ಠಾಣೆಯ ಆಕೃತಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ. ಸದ್ಯ ವೈದ್ಯರ ಮೇಲ್ವಿಚಾರಣೆಯಲ್ಲಿರುವ ವಿನೋದ್ ಕಾಂಬ್ಳಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಎಂತಲೂ ಹೇಳಲಾಗುತ್ತಿದೆ. ವಾಸ್ತವವಾಗಿ ವಾಸ್ತವವಾಗಿ ಕೆಲವು ದಿನಗಳ ಹಿಂದೆ ಮುಂಬೈನ ಪ್ರಸಿದ್ಧ ಶಿವಾಜಿ ಪಾರ್ಕ್ ಮೈದಾನದಲ್ಲಿ ರಮಾಕಾಂತ್ ಅಚ್ರೇಕರ್ ಅವರ ಸ್ಮಾರಕವನ್ನು ಇತ್ತೀಚೆಗೆ ಅನಾವರಣಗೊಳಿಸಲಾಯಿತು. ಈ ಸಮಾರಂಭದಲ್ಲಿ ಸಚಿನ್ ತೆಂಡೂಲ್ಕರ್, ವಿನೋದ್ ಕಾಂಬ್ಳಿ ಸೇರಿದಂತೆ ರಮಾಕಾಂತ್ ಅವರ ಕೋಚಿಂಗ್‌ನಲ್ಲಿ ಬೆಳೆದಿದ್ದ ಪ್ರಸಿದ್ಧ ಕ್ರಿಕೆಟಿಗರು ಉಪಸ್ಥಿತರಿದ್ದರು. ಆ ಸಮಾರಂಭದಲ್ಲೇ ಕಾಂಬ್ಳಿ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವುದು ಜಗಜ್ಜಾಹೀರಾಗಿತ್ತು.
ಕುಡಿತದ ಚಟದಿಂದ ವಿನೋದ್ ಕಾಂಬ್ಳಿ ಅವರ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಇತ್ತೀಚೆಗೆ, ಕಾಂಬ್ಳಿ ಸ್ಥಿತಿಯನ್ನು ನೋಡಿ, ಟೀಂ ಇಂಡಿಯಾದ ಹಿರಿಯ ಕ್ರಿಕೆಟಿಗ ಕಪಿಲ್ ದೇವ್, 1983 ರ ವಿಶ್ವಕಪ್ ತಂಡದ ಸಹ ಆಟಗಾರರೊಂದಿಗೆ ಕಾಂಬ್ಳಿಗೆ ಸಹಾಯ ಮಾಡುವುದಾಗಿ ಹೇಳಿಕೊಂಡಿದ್ದರು. ಆದರೆ ತಾವು ಸಹಾಯ ಮಾಡಬೇಕೆಂದರೆ ಕಾಂಬ್ಳಿ ರಿಹ್ಯಾಬ್ ಸೆಂಟರ್ಗೆ ದಾಖಲಾಗಬೇಕು ಎಂಬ ಷರತ್ತನ್ನು ವಿಧಿಸಿದ್ದರು. ಇದರ ನಂತರ, 52 ವರ್ಷದ ವಿನೋದ್ ಕಾಂಬ್ಳಿ ಕೂಡ ಕಪಿಲ್ ದೇವ್ ಅವರ ಪ್ರಸ್ತಾಪವನ್ನು ಒಪ್ಪಿಕೊಂಡು ಸಹಾಯಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಿದ್ದರು. ಪುನರ್ವಸತಿಗೆ ಹೋಗಲು ಸಿದ್ಧರಾಗಿದ್ದ ಕಾಂಬ್ಳಿ ಇದೀಗ ಮತ್ತೆ ತೀವ್ರ ಅನಾರೋಗ್ಯಕ್ಕೀಡಾಗಿದ್ದಾರೆ.
ವಿನೋದ್ ಕಾಂಬ್ಳಿ ಆಸ್ಪತ್ರೆಗೆ ದಾಖಲು
ಇತ್ತೀಚೆಗೆ ಅಭಿಮಾನಿಯೊಬ್ಬರು ವಿನೋದ್ ಕಾಂಬ್ಳಿ ಅವರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ಆಸ್ಪತ್ರೆಯಲ್ಲಿ ದಾಖಲಾಗಿರುವುದನ್ನು ಕಾಣಬಹುದಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಕಾಂಬ್ಳಿ ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ನ ಸಂದರ್ಶನವೊಂದರಲ್ಲಿ ತಾನು ಗಂಭೀರ ಮೂತ್ರದ ಸೋಂಕಿನಿಂದ ಬಳಲುತ್ತಿದ್ದೇನೆ ಎಂದು ಹೇಳಿಕೊಂಡಿದ್ದರು. ಇದಲ್ಲದೆ ಕಾಂಬ್ಳಿ ಅನೇಕ ಕಾಯಿಲೆಗಳಿಂದ ಬಳಲುತ್ತಿರುವುದಾಗಿಯೂ ಹೇಳಿಕೊಂಡಿದ್ದರು.