ನೆಲ್ಯಾಡಿ: ಪಂಚ ಗ್ಯಾರಂಟಿ ಯೋಜನೆಗೆ ನೋಂದಾವಣೆ, ತಿರಸ್ಕೃತ ಅರ್ಜಿಗಳ ವಿಲೇವಾರಿ ಶಿಬಿರ

ಶೇರ್ ಮಾಡಿ

ನೆಲ್ಯಾಡಿ :ರಾಜ್ಯ ಸರಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳಾದ ಶಕ್ತಿ, ಗೃಹಜ್ಯೋತಿ, ಯುವನಿಧಿ, ಗೃಹಲಕ್ಷ್ಮೀ, ಅನ್ನಭಾಗ್ಯ ಯೋಜನೆಗಳಿಗೆ ನೋಂದಾವಣೆಗೆ ಬಾಕಿ ಇರುವ ಮತ್ತು ತಿರಸ್ಕೃತ ಅರ್ಜಿಗಳ ವಿಲೇವಾರಿ ಶಿಬಿರ ಜ.29ರಂದು ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಲ್ಪವೃಕ್ಷ ಸಹಕಾರಿ ಸೌಧದ ಸಭಾಂಗಣದಲ್ಲಿ ಕಡಬ ತಾಲ್ಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವತಿಯಿಂದ ನಡೆಯಿತು.

ಶಿಬಿರವನ್ನು ಸಭೆಯ ಅಧ್ಯಕ್ಷತೆ ವಹಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕಡಬ ತಾಲೂಕು ಇದರ ಅಧ್ಯಕ್ಷ ಸುಧೀರ್‌ಕುಮಾರ್ ಶೆಟ್ಟಿ ಅವರು ಇಬ್ಬರು ಫಲಾನುಭವಿಗಳ ಜೊತೆ ಸೇರಿ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪಂಚಗ್ಯಾರಂಟಿ ಯೋಜನೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ದೂರದಷ್ಟಿಯ ಯೋಜನೆಗಳಾಗಿವೆ. ವಿಧಾನಸಭೆ ಚುನಾವಣೆಗೆ ಮೊದಲು ನೀಡಿದ ಭರವಸೆಯಂತೆ 5 ಯೋಜನೆಗಳನ್ನೂ ಸರಕಾರ ಜಾರಿಗೆ ತಂದಿದೆ. ಈ ಮೂಲಕ ತಾಯಂದಿರ ಕಣ್ಣೀರೊರೆಸುವ ಕೆಲಸ ಸರಕಾರ ಮಾಡಿದೆ. ಈ ಯೋಜನೆ ಪ್ರತಿಯೊಬ್ಬ ಅರ್ಹ ಫಲಾನುಭವಿಗೂ ಸಿಗಬೇಕೆಂಬ ಹಿನ್ನೆಲೆಯಲ್ಲಿ ಸರಕಾರ ಅನುಷ್ಠಾನ ಸಮಿತಿ ನೇಮಕ ಮಾಡಿದೆ. ಅರ್ಹರಿಗೆ ಪ್ರಯೋಜನ ಸಿಗಲು ಸಮಿತಿ ಪ್ರಯತ್ನಿಸಲಿದೆ ಎಂದರು. ಕಡಬ ತಾಲೂಕಿನಲ್ಲಿ ಅನ್ನಭಾಗ್ಯ ಯೋಜನೆಯಡಿ 31,847 ಫಲಾನುಭವಿಗಳು ಪ್ರಯೋಜನ ಪಡೆದುಕೊಂಡಿದ್ದಾರೆ. ಗೃಹಲಕ್ಷ್ಮೀ ಯೋಜನೆಯಡಿ 25,738 ಫಲಾನುಭವಿಗಳಿಗೆ ಈ ತನಕ 73,60,80,000 ರೂ. ಬಂದಿದೆ. ಯುವ ನಿಧಿ ಯೋಜನೆಯಡಿ 206 ಫಲಾನುಭವಿಗಳಿಗೆ 24,82,500 ರೂ.ಬಂದಿದೆ. 27,513 ಮಂದಿ ಗೃಹಜ್ಯೋತಿ ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆ. ಶಕ್ತಿ ಯೋಜನೆಯಡಿ 1,80,22,905 ಮಂದಿ ಸೌಲಭ್ಯ ಈವರೆಗೆ ಪಡೆದುಕೊಂಡಿದ್ದಾರೆ ಎಂದು ಸುಧೀರ್‌ಕುಮಾರ್ ಶೆಟ್ಟಿ ಹೇಳಿದರು.

ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡ ಅವರು ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳಿಗೆ ರಾಜ್ಯ ಸರಕಾರ ಸಾವಿರಾರು ಕೋಟಿ ರೂ.,ಅನುದಾನ ನೀಡುತ್ತಿದೆ. ಶೇ.95ರಷ್ಟು ಮಂದಿ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. ಮಹಿಳೆಯರು ಸ್ವಾವಲಂಬಿಗಳಾಗುತ್ತಿದಾರೆ. ಯೋಜನೆಯ ಲಾಭ ನೇರವಾಗಿ ಫಲಾನುಭವಿಗೆ ಸಿಗುವ ವ್ಯವಸ್ಥೆ ಜಾರಿಗೆ ತಂದಿರುವುದರಿಂದ ಯಾವುದೇ ಸೋರಿಕೆಯೂ ಆಗುತ್ತಿಲ್ಲ. ತಾಂತ್ರಿಕ ಕಾರಣಗಳಿಂದಾಗಿ ಕೆಲವೊಂದು ಫಲಾನುಭವಿಗಳಿಗೆ ಯೋಜನೆಯ ಲಾಭ ಸಿಗದೇ ಇರಬಹುದು. ಎಲ್ಲಾ ಅರ್ಹ ಫಲಾನುಭವಿಗಳಿಗೂ ಪ್ರಯೋಜನ ಸಿಗಬೇಕೆಂಬ ನಿಟ್ಟಿನಲ್ಲಿ ಸರಕಾರ ಅನುಷ್ಠಾನ ಸಮಿತಿ ರಚನೆ ಮಾಡಿದೆ ಎಂದು ಹೇಳಿದರು.

ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಕಡಬ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಅವರು, ಪಂಚ ಗ್ಯಾರಂಟಿ ಯೋಜನೆಗಳು ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಾಗಿವೆ. ಈ ಯೋಜನೆಗೆ ಸರಕಾರದ ದೊಡ್ಡ ಮಟ್ಟದಲ್ಲಿ ಅನುದಾನ ನೀಡುತ್ತಿದೆ. ಜನಸಾಮಾನ್ಯರು ಸ್ವಾವಲಂಬಿಗಳಾಗಬೇಕು, ಬಡತನದಿಂದ ಮುಕ್ತರಾಗಬೇಕೆಂಬ ನಿಟ್ಟಿನಲ್ಲಿ ಯೋಜನೆ ಜಾರಿಗೆ ತರಲಾಗಿದೆ. ಇದರ ಸಮರ್ಪಕ ಅನುಷ್ಠಾನಕ್ಕೆ ಅನುಷ್ಠಾನ ಸಮಿತಿಯೂ ರಚನೆಗೊಂಡಿದೆ. ಸಣ್ಣ ತೊಡಕುಗಳಿಂದ ಕೆಲವೊಂದು ಫಲಾನುಭವಿಗಳು ಯೋಜನೆಯಿಂದ ವಂಚಿತರಾಗುತ್ತಿದ್ದಾರೆ. ಎಲ್ಲಾ ಫಲಾನುಭವಿಗಳಿಗೂ ಯೋಜನೆಯ ಸೌಲಭ್ಯ ಸಿಗಬೇಕೆಂಬ ನಿಟ್ಟಿನಲ್ಲಿ ಶಿಬಿರ ಆಯೋಜಿಸಲಾಗಿದೆ ಎಂದು ಹೇಳಿದರು.

ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರಾದ ಉಷಾ ಅಂಚನ್, ಗಂಗಾಧರ ಶೆಟ್ಟಿ ಹೊಸಮನೆ, ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್ ಅವರು ಸಂದರ್ಭೋಚಿತವಾಗಿ ಮಾತನಾಡಿದರು. ಕೌಕ್ರಾಡಿ ಗ್ರಾ.ಪಂ ಅಧ್ಯಕ್ಷರಾದ ಉದಯಕುಮಾರ್ ದೋತಿಲ, ಕಡಬ ಮೆಸ್ಕಾಂ ಇಲಾಖೆಯ ಸಹಾಯಕ ನಿರ್ವಾಹಕ ಅಭಿಯಂತರ ಸಜಿಕುಮಾರ್, ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರಾದ ಅವಿನಾಶ್ ಬೈತ್ತಡ್ಕ. ಸತೀಶ್ ಪಳಿಕೆ, ರಾಘವೇಂದ್ರ ದೈಪಿಲ, ಭವಾನಿಶಂಕರ್, ಮಾಧವ ಪೂಜಾರಿ, ಹನೀಫ್ ಕೆ.ಎಮ್., ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಳಿನಾಕ್ಷಿ ಪ್ರಾರ್ಥಿಸಿದರು. ನೆಲ್ಯಾಡಿ ಗ್ರಾಮ ಪಂಚಾಯಿತಿ ಪಿಡಿಒ ಮೋಹನ್‌ಕುಮಾರ್ ವಂದಿಸಿದರು. ತಾ.ಪಂ.ನ ಭರತ್‌ರಾಜ್ ನಿರೂಪಿಸಿದರು.

ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ಗೊಂದಲ:
ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದ್ದರೂ ಹಣ ಬಾರದೇ ಇರುವ ಬಹುತೇಕ ಅರ್ಜಿದಾರರೇ ಶಿಬಿರಕ್ಕೆ ಬಂದಿದ್ದು ಇಲ್ಲಿಯೂ ಅವರ ಸಮಸ್ಯೆಗೆ ಪರಿಹಾರ ಸಿಗದೇ ಇರುವುದು ಗೊಂದಲ, ಅಸಮಾಧಾನಕ್ಕೂ ಕಾರಣವಾಯಿತು. ಈ ಶಿಬಿರದಲ್ಲಿ ಗ್ಯಾರಂಟಿ ಯೋಜನೆಗಳ ನೋಂದಾವಣೆಗೆ ಬಾಕಿ ಇರುವ ಮತ್ತು ತಿರಸ್ಕೃತ ಅರ್ಜಿಗಳ ವಿಲೇವಾರಿ ಮಾಡಲಾಗುವುದು ಎಂದು ತಿಳಿಸಿದ್ದರೂ ಜಿಎಸ್‌ಟಿ, ಐಟಿ, ಪಡಿತರ ಚೀಟಿಯಲ್ಲಿನ ಸಮಸ್ಯೆಯಿಂದಾಗಿ ಬಾಕಿ ಆಗಿರುವ ಗೃಹಲಕ್ಷ್ಮೀ ಯೋಜನೆ ಅರ್ಜಿದಾರರ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಈ ಸಮಸ್ಯೆ ನೀವೇ ಸರಿಪಡಿಸಿಕೊಂಡು ಬರುವಂತೆ ಅಧಿಕಾರಿಗಳು ಹೇಳಿದ್ದು ಅರ್ಜಿದಾರರ ಅಸಮಾಧಾನಕ್ಕೂ ಕಾರಣವಾಯಿತು.
ಸರಕಾರದ ಗಮನಕ್ಕೆ:
ಜಿಎಸ್‌ಟಿ, ಐಟಿ ರಿಟರ್ನ್ಸ್ ಸಲ್ಲಿಕೆ ಹಾಗೂ ಇನ್ನಿತರ ಸಮಸ್ಯೆಗಳಿಂದಾಗಿ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದರೂ ಹಣ ಬಾರದೇ ಇರುವ ಫಲಾನುಭವಿಗಳ ಹೆಸರು ಮತ್ತು ಮೊಬೈಲ್ ನಂಬರ್ ಪಡೆದುಕೊಂಡಿದ್ದೇವೆ. ಈ ಸಮಸ್ಯೆಯನ್ನು ಸರಕಾರದ ಗಮನಕ್ಕೆ ತಂದು ಪರಿಹಾರ ಮಾಡಲು ಪ್ರಯತ್ನಿಸುತ್ತೇವೆ.
-ಸುಧೀರ್‌ಕುಮಾರ್ ಶೆಟ್ಟಿ
ಅಧ್ಯಕ್ಷರು, ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ,ಕಡಬ ತಾಲೂಕು

  •  

Leave a Reply

error: Content is protected !!