3 ತಾಲೂಕು ಬೆಸೆಯುವ ಕೋಡಂಗೇರಿ-ಉಪ್ಪಾರಹಳ್ಳ ಸೇತುವೆ-ಕಿಂಡಿ ಅಣೆಕಟ್ಟು ಲೋಕಾರ್ಪಣೆಗೆ ಸಜ್ಜು

ಶೇರ್ ಮಾಡಿ

ಶಾಸಕ ಹರೀಶ್ ಪೂಂಜ ಅವರ ಪ್ರಯತ್ನದಿಂದ ನಮ್ಮ ಕನಸು ನನಸಾಗಿದೆ – ಶಿವಪ್ಪ ಗೌಡ, ಜಾರಿಗೆತ್ತಡಿ ಕೊಕ್ಕಡ

ಕಿಂಡಿ ಅಣೆಕಟ್ಟಿನಿಂದ ಕೃಷಿಕರಿಗೆ ಅನುಕೂಲವಾಗಲಿದೆ – -ಯೋಗೀಶ ಅಳಂಬಿಲ, ನಿಕಟಪೂರ್ವ ಅಧ್ಯಕ್ಷರು, ಗ್ರಾ.ಪಂ ಕೊಕ್ಕಡ

ಕೊಕ್ಕಡ: ಬೆಳ್ತಂಗಡಿ, ಪುತ್ತೂರು ಮತ್ತು ಕಡಬ ತಾಲೂಕುಗಳನ್ನು ಬೆಸೆಯುವ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಕೋಡಂಗೇರಿ ಉಪ್ಪಾರಹಳ್ಳ ಸೇತುವೆ- ಕಿಂಡಿ ಅಣೆಕಟ್ಟು ಲೋಕಾರ್ಪಣೆಗೆ ಸಜ್ಜಾಗಿದೆ. ಸಂಪರ್ಕ ಸೇತುವೆ ಸಹಿತವಾಗಿ ನಿರ್ಮಿಸಿರುವ 3.35 ಕೋಟಿ ರೂ. ವೆಚ್ಚದ ಈ ಕಿಂಡಿ ಅಣೆಕಟ್ಟಿನಿಂದಾಗಿ ವಾಹನ ಸಂಚಾರಕ್ಕೆ ಮಾತ್ರವಲ್ಲದೆ ನೀರು ಸಂಗ್ರಹಕ್ಕೂ ಸಹಕಾರಿಯಾಗಲಿದೆ.

ಕೊಕ್ಕಡ ಗ್ರಾಮದ 400 ಮನೆಗಳು ಮತ್ತು ಗೋಳಿತೊಟ್ಟು ಗ್ರಾಮದ 100ಕ್ಕೂ ಹೆಚ್ಚು ಮನೆಗಳಿಗೆ ಈ ಸೇತುವೆಯ ಅಗತ್ಯವಿತ್ತು. ಊರಿನ ಹಿರಿಯರಾದ ದಿ.ರಾಮಣ್ಣ ಗೌಡ ಕೊಡಿಂಗೇರಿ ಹಾಗೂ ಗಂಗಯ್ಯ ಗೌಡರ ನೇತೃತ್ವದಲ್ಲಿ ಚಸೇತುವೆಗಾಗಿ ಹೋರಾಟ ನಡೆದಿತ್ತು. ಕೊನೆಗೂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಪಶ್ಚಿಮ ವಾಹಿನಿ ಯೋಜನೆಯಡಿಯಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಮೂಲಕ ಶಾಸಕg ಹರೀಶ್ ಪೂಂಜ ಅವರ ಮುತ್ತುವರ್ಜಿಯಿಂದ ಯೋಜನೆ ಮಂಜೂರಾಗಿತ್ತು. ಇದೀಗ ಕಾಮಗಾರಿ ಪೂರ್ಣಗೊಂಡಿದ್ದು ಉದ್ಘಾಟನೆಗೆ ಸಜ್ಜಾಗಿದೆ.

ಬಹುಪಯೋಗಿ ಸೇತುವೆ:
ಬಹುಪಯೋಗಿ ಸೇತುವೆ ಮೂಲಕ ಪಟ್ರಮೆಯಿಂದ ಧರ್ಮಸ್ಥಳಕ್ಕೆ ಸುಲಭ ಸಂಪರ್ಕ ಸಾಧ್ಯವಾಗಲಿದೆ. ಕಡಬ ಮತ್ತು ಪುತ್ತೂರು ತಾಲೂಕಿಗೂ ಸಂಪರ್ಕ ಸುಲಭವಾಗಲಿದೆ. ಕೊಕ್ಕಡ, ಉಜಿರೆ ಮೂಲಕ ಚಾರ್ಮಾಡಿ ಭಾಗಕ್ಕೆ ತೆರಳುವವರಿಗೂ ಪ್ರಯೋಜನಕಾರಿಯಾಗಲಿದೆ. ಕಿಂಡಿ ಅಣೆಕಟ್ಟು ಕಾರಣದಿಂದ ಬೇಸಿಗೆಯಲ್ಲಿ ನೀರು ಸಂಗ್ರಹಗೊಂಡು ಸುಮಾರು 150 ಎಕ್ರೆ ಪ್ರದೇಶಕ್ಕೆ ನೀರಾವರಿ ಸಿಗಲಿದೆ. ಜತೆಗೆ ಅಂತರ್ಜಲ ಮಟ್ಟ ಏರಲಿದೆ.

ಕಿಂಡಿ ಅಣೆಕಟ್ಟಿನಿಂದ ಕೃಷಿಕರಿಗೆ ಅನುಕೂಲವಾಗಲಿದೆ. ಅಂತರ್ಜಲ ಮಟ್ಟ ವೃದ್ಧಿಯಾಗಲಿದೆ. ಸೇತುವೆಯಿಂದಾಗಿ ಪ್ರಯಾಣಕ್ಕೆ ಅನುಕೂಲವಾಗಲಿದೆ. ಮುಂಬರುವ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರಯೋಜನಕ್ಕೆ ಸಿಗಲಿದೆ.
-ಯೋಗೀಶ ಅಳಂಬಿಲ, ನಿಕಟಪೂರ್ವ ಅಧ್ಯಕ್ಷರು, ಗ್ರಾ.ಪಂ ಕೊಕ್ಕಡ

ಅಣೆಕಟ್ಟು ಲೋಕಾರ್ಪಣೆಗೊಂಡ ಮೇಲೂ ಗ್ರಾಮಸ್ಥರನ್ನು ಸೇರಿಸಿಕೊಂಡು ಮೇಲುಸ್ತುವಾರಿ ತಂಡ ರಚಿಸಲಾಗುವುದು. ಈ ತಂಡ ನಿರಂತರ ನಿಗಾ ವಹಿಸಲಿದೆ. ಕಿಂಡಿ ಅಣೆಕಟ್ಟಿನಲ್ಲಿ ನೀರು ಸಂಗ್ರಹ ಆಗುವಂತೆ.  ತ್ಯಾಜ್ಯ ಸಂಗ್ರಹ ಆಗದಂತೆ ನೋಡಿಕೊಳ್ಳಲಾಗುವುದು.
-ರಾಕೇಶ್, ಸಹಾಯಕ ಇಂಜಿನಿಯರ್, ಸಣ್ಣ ನೀರಾವರಿ ಇಲಾಖೆ,

ಶಾಸಕ ಹರೀಶ್ ಪೂಂಜ ಅವರ ಪ್ರಯತ್ನದಿಂದ ನಮ್ಮ ಕನಸು ನನಸಾಗಿದೆ. 3 ತಾಲೂಕುಗಳನ್ನು ಸಂಪರ್ಕಿಸಲು ಸಹಕಾರಿಯಾಗಿದೆ. ನೀರು ಅನಗತ್ಯ ಪೋಲಾಗುವುದು ಕಿಂಡಿ ಅಣೆಕಟ್ಟಿನ ಮೂಲಕ ನಿವಾರಣೆಯಾಗಲಿದೆ.
-ಶಿವಪ್ಪ ಗೌಡ, ಜಾರಿಗೆತ್ತಡಿ ಕೊಕ್ಕಡ

  •  

Leave a Reply

error: Content is protected !!