ವಿಧಾನಸಭೆಯಲ್ಲಿ ಗದ್ದಲ: 18 ವಿಪಕ್ಷ ಶಾಸಕರ ಅಮಾನತು, 6 ತಿಂಗಳ ಸಸ್ಪೆಂಡ್‌

ಶೇರ್ ಮಾಡಿ

ಬೆಂಗಳೂರು: ವಿಧಾನಸಭೆಯಲ್ಲಿ ಹನಿಟ್ರ್ಯಾಪ್‌ ಪ್ರಕರಣದ ತನಿಖೆಗೆ ಆಗ್ರಹಿಸುತ್ತಿದ್ದ ವಿಪಕ್ಷ ಶಾಸಕರ ಪ್ರತಿಭಟನೆ ಗದ್ದಲಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಸ್ಪೀಕರ್‌ ಯು.ಟಿ ಖಾದರ್‌ 18 ಶಾಸಕರನ್ನು 6 ತಿಂಗಳ ಕಾಲ ಅಮಾನತುಗೊಳಿಸುವ ಆದೇಶ ಹೊರಡಿಸಿದ್ದಾರೆ.

ಹನಿಟ್ರ್ಯಾಪ್ ಪ್ರಕರಣದ ನ್ಯಾಯಾಂಗ ತನಿಖೆ ನಡೆಸುವಂತೆ ಆಗ್ರಹಿಸಿ, ವಿಧಾನಸಭೆಯಲ್ಲಿ ಇಂದು ಬೆಳಿಗ್ಗೆ ವಿಪಕ್ಷ ಶಾಸಕರು ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ವೇಳೆ ಭಾರೀ ಗದ್ದಲ ಉಂಟಾಗಿ, ಶಾಸಕರು ಸ್ಪೀಕರ್ ಪೀಠಕ್ಕೆ ಕಾಗದಗಳನ್ನು ಎಸೆದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಈ ಬೆಳವಣಿಗೆಯಿಂದ ಅಸಮಾಧಾನಗೊಂಡ ಸ್ಪೀಕರ್‌ ಖಾದರ್‌ ಕಲಾಪವನ್ನು ಮುಂದೂಡಿದರು.

ಮಧ್ಯಾಹ್ನ ಕಲಾಪ ಪುನರಾರಂಭಗೊಂಡಾಗ, ಸ್ಪೀಕರ್‌ ಪೀಠಕ್ಕೆ ಅಪಮಾನ ಮಾಡಿರುವ ಕಾರಣವನ್ನು ಉಲ್ಲೇಖಿಸಿ 18 ಶಾಸಕರನ್ನು 6 ತಿಂಗಳ ಕಾಲ ಅಮಾನತು ಮಾಡಲಾಗುತ್ತಿದೆ ಎಂದು ಸ್ಪೀಕರ್‌ ಘೋಷಿಸಿದರು. ಈ ನಿರ್ಧಾರಕ್ಕೆ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು.

ಅಮಾನತು ವಿಧಿಸಲಾದ ಶಾಸಕರ ಪಟ್ಟಿ:
ದೊಡ್ಡನಗೌಡ ಪಾಟೀಲ್, ಅಶ್ವಥನಾರಾಯಣ, ಎಸ್.ಆರ್ ವಿಶ್ವನಾಥ್, ಬೈರತಿ ಬಸವರಾಜು, ಎಂ.ಆರ್ ಪಟೇಲ್, ಚನ್ನಬಸಪ್ಪ, ಉಮಾನಾಥ್ ಕೋಟ್ಯನ್, ಸುರೇಶ್ ಗೌಡ, ಶೈಲೇಂದ್ರ ಬೆಲ್ದಾಳೆ, ಶರಣು ಸಲಗಾರ್, ಸಿ.ಕೆ ರಾಮಮೂರ್ತಿ, ಯಶ್ಪಾಲ್ ಸುವರ್ಣ, ಹರಿಶ್ ಬಿ.ಪಿ, ಭರತ್ ಶೆಟ್ಟಿ, ಬಸವರಾಜ ಮತ್ತಿಮೂಡ್, ಧೀರಜ್ ಮುನಿರಾಜು, ಮುನಿರತ್ನ, ಚಂದ್ರು ಲಮಾಣಿ.

ಅಮಾನತುಗೊಂಡ ಶಾಸಕರಿಗೆ ಈ ಷರತ್ತುಗಳು ಅನ್ವಯ

  1. ಶಾಸಕರು ವಿಧಾನಸಭೆಯ ಸಭಾಂಗಣ, ಲಾಬಿ ಮತ್ತು ಗ್ಯಾಲರಿಗಳಿಗೆ ಪ್ರವೇಶಿಸುವಂತಿಲ್ಲ.
  2. ಶಾಸಕರು ಸದಸ್ಯರಾಗಿರುವ ವಿಧಾನಮಂಡಲದ/ವಿಧಾನ ಸಭೆಯ ಸ್ಥಾಯಿ ಸಮಿತಿಗಳ ಸಭೆಗಳಲ್ಲಿಯೂ ಭಾಗವಹಿಸುವಂತಿಲ್ಲ.
  3. ವಿಧಾನ ಸಭೆಯ ಕಾರ್ಯಕಲಾಪಗಳ ಪಟ್ಟಿಯಲ್ಲಿ ಅವರುಗಳ ಹೆಸರಿನಲ್ಲಿ ಯಾವುದೇ ವಿಷಯವನ್ನು ನಮೂದು ಮಾಡತಕ್ಕದಲ್ಲ.
  4. ಅಮಾನತ್ತಿನ ಅವಧಿಯಲ್ಲಿ ಅವರು ನೀಡುವ ಯಾವುದೇ ಸೂಚನೆಗಳನ್ನು ಸ್ವೀಕರಿಸಲಾಗುವುದಿಲ್ಲ.
  5. ಅಮಾನತ್ತಿನ ಅವಧಿಯಲ್ಲಿ ನಡೆಯುವ ಸಮಿತಿಗಳ ಚುನಾವಣೆಯಲ್ಲಿ ಅವರು ಮತದಾನ ಮಾಡುವಂತಿಲ್ಲ.
  6. ಅಮಾನತ್ತಿನ ಅವಧಿಯಲ್ಲಿ ಅವರುಗಳು ಯಾವುದೇ ದಿನಭತ್ಯೆಯನ್ನು ಪಡೆಯಲು ಅರ್ಹರಿರುವುದಿಲ್ಲ.
  •  

Leave a Reply

error: Content is protected !!