

ನೆಲ್ಯಾಡಿ: ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಆಲಂಪಾಡಿಯಲ್ಲಿ ಮಹಮ್ಮದ್ ಅಶ್ರಫ್ (39) ಎಂಬವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬುಧವಾರ ಸಂಜೆ ನಡೆದಿದೆ.
ಮೃತ ಮಹಮ್ಮದ್ ಅಶ್ರಫ್ ಅವರು ಮೊದಲು ವಿವಾಹವಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳು ಇದ್ದರು. ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಕೊರತೆಯಿಂದ ಪತ್ನಿ ಮಕ್ಕಳೊಂದಿಗೆ ತಮ್ಮ ತಾಯಿ ಮನೆಗೆ ಮರಳಿದರು. ನಂತರ ಅಶ್ರಫ್ ಮತ್ತೊಂದು ವಿವಾಹವಾಗಿ ಫರಂಗಿಪೇಟೆಯಲ್ಲಿ ವಾಸವಾಗಿದ್ದರು. ಅವರು ದಕ್ಕೆಯಲ್ಲಿ ಮೀನಿನ ವ್ಯಾಪಾರ ಮಾಡುತ್ತಿದ್ದರು. ಆದರೆ, ಕೆಲಕಾಲದ ಬಳಿಕ ಅಮಲು ಪದಾರ್ಥಗಳ ಚಟ ಹಿಡಿದ ಕಾರಣ ಕುಟುಂಬದಿಂದ ದೂರಾಗಿ, ತಮ್ಮ ಊರಿನ ಆಲಂಪಾಡಿಗೆ ಬಂದು ಒಬ್ಬನೇ ವಾಸಿಸುತ್ತಿದ್ದರು.
ಮಹಮ್ಮದ್ ಅಶ್ರಫ್ ಅವರು ವಿಪರೀತ ಅಮಲು ಪದಾರ್ಥ ಸೇವನೆಯ ಚಟ ಮತ್ತು ಕುಟುಂಬದಿಂದ ದೂರವಾಗಿದ್ದ ಹಿನ್ನೆಲೆಯಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು, ಮನೆ ಒಳಗಡೆ ಕುತ್ತಿಗೆಗೆ ಬಟ್ಟೆ ಕಟ್ಟಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ತಂದೆ ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








