


ಬೆಳಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಡೋಳುಕೆರೆ ಕಾಡಿನ ಮಧ್ಯೆ ಪತ್ತೆಯಾದ ಹೆಣ್ಣು ಮಗುವಿನ ಪೋಷಕರನ್ನು ಧರ್ಮಸ್ಥಳ ಪೊಲೀಸರು ಪತ್ತೆ ಹಚ್ಚಿದ್ದಾರೆ. ಗ್ರಾಮದ ಜನರು ಈ ಕುರಿತು ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರ ಸಹಕಾರದೊಂದಿಗೆ ಮಗುವಿನ ತಂದೆ ತಾಯಿಯ ವಿವರಗಳೂ ಲಭ್ಯವಾಗಿವೆ.
ಧರ್ಮಸ್ಥಳ ಪೊಲೀಸ್ ಠಾಣಾ ಸಬ್ ಇನ್ಸ್ಪೆಕ್ಟರ್ ಸಮರ್ಥ ಆರ್. ಗಾಣಿಗೇರಾ ನೇತೃತ್ವದ ತಂಡವು ಮಗುವಿನ ತಂದೆ ರಂಜಿತ್ ಗೌಡನನ್ನು ಎ.2 ರಂದು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.
ರಂಜಿತ್ ಗೌಡ ಮತ್ತು ಸುಶ್ಮಿತಾ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಈ ವಿಷಯ ಇಬ್ಬರ ಮನೆಯವರಿಗೆ ತಿಳಿದಿರಲಿಲ್ಲ. ಈ ನಡುವೆ ಸುಶ್ಮಿತಾ ಗರ್ಭಿಣಿಯಾಗಿದ್ದು, ಅವರು ತಮ್ಮ ಗರ್ಭಧಾರಣೆ ವಿಷಯವನ್ನು ಯಾರಿಗೂ ಹೇಳದೆ ಮುಚ್ಚಿಟ್ಟಿದ್ದರು ಎಂದು ಮನೆಯವರು ಹಾಗೂ ಸ್ಥಳೀಯರು ತಿಳಿಸಿದ್ದಾರೆ.
ಸುಶ್ಮಿತಾ ಮತ್ತು ರಂಜಿತ್ ತಮ್ಮ ತಾಯಿ-ಮಗುವಿನ ಆರೋಗ್ಯದ ಬಗ್ಗೆ ವೈದ್ಯಕೀಯ ಪರೀಕ್ಷೆಗಾಗಿ ಪ್ರತಿಮಾಸ ಕ್ಲಿನಿಕ್ ಗೆ ತೆರಳುತ್ತಿದ್ದರು. ಆದರೆ, ತಾಯಿ ಕಾರ್ಡ್ ಬಗ್ಗೆ ಪ್ರಶ್ನಿಸಿದಾಗ, ಅದು ಕೈ ತಪ್ಪಿ ಹೋಗಿದೆ ಎಂದು ಹೇಳಲಾಗಿತ್ತು.
ಮಾ.22 ಶನಿವಾರ ಬೆಳಾಲು ಕೊಡೋಳುಕೆರೆ ಕಾಡಿನ ಮಧ್ಯೆ ಸಾರ್ವಜನಿಕರು ಹೆಣ್ಣು ಮಗುವನ್ನು ಪತ್ತೆಹಚ್ಚಿದ್ದರು. ಈ ವಿಚಾರ ಗ್ರಾಮದಲ್ಲಿ ಚರ್ಚೆಯಾಗಿದ್ದು, ಈಗ ಪೊಲೀಸರ ತನಿಖೆಯಿಂದ ಮಗುವಿನ ಪೋಷಕರನ್ನು ಪತ್ತೆಹಚ್ಚಲಾಗಿದೆ.








