


ಕೊಕ್ಕಡ: ಕೆಮ್ಮಟ್ಟೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ (ರಿ) ಧರ್ಮಸ್ಥಳ ಮತ್ತು ಯುನಿಸೆಫ್ ಹೈದರಾಬಾದ್ ಜಂಟಿ ಆಶ್ರಯದಲ್ಲಿ “ನೀರು ಉಳಿಸಿ, ಭವಿಷ್ಯದ ನೀರು” ಮಹಾ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಈ ಅಭಿಯಾನ ನಡೆಯಿತು.
ಶುದ್ಧ ನೀರು ಏಕೆ ಅಗತ್ಯ, ನೀರಿನ ನಿರ್ವಹಣೆಯ ಅವಶ್ಯಕತೆ, ಪ್ರಸ್ತುತ ರಾಜ್ಯ ಮತ್ತು ಜಿಲ್ಲೆಯಲ್ಲಿ ನೀರಿನ ಪರಿಸ್ಥಿತಿ, ನೀರಿನ ಸಂರಕ್ಷಣೆಯಲ್ಲಿ ನಮ್ಮ ಹೊಣೆಗಾರಿಕೆ ಮತ್ತು ನಾವು ಹೇಗೆ ನೀರನ್ನು ಉಳಿಸಬಹುದು ಎಂಬ ಕುರಿತು ವಲಯ ಮೇಲ್ವಿಚಾರಕರಾದ ಚಿತ್ತರಂಜನ್ ಅವರು ಸವಿಸ್ತಾರವಾಗಿ ಮಾಹಿತಿ ನೀಡಿದರು. ಅವರು ತಮ್ಮ ಮಾಹಿತಿಯಲ್ಲಿ ಮನೆಗಳಲ್ಲಿ ಇಂಗು ಗುಂಡಿ ನಿರ್ಮಿಸಿ ಮನೆಯ ಸುತ್ತಲಿನ ನೀರನ್ನು ಭೂಮಿಗೆ ಇಂಗಿಸುವಂತೆ ಮಾಡುವುದು, ಸಮುದಾಯದ ಪ್ರದೇಶಗಳಲ್ಲಿ ಇಂಗು ಗುಂಡಿ ನಿರ್ಮಿಸಿ ನೆಲದ ನೀರಿನ ಮಟ್ಟ ಹೆಚ್ಚಿಸುವುದು, ಜೊರೆಗೆ ನೀರು ಹೋಗದಂತೆ ನೋಡಿಕೊಳ್ಳುವುದು, ಉದಾಹರಣೆಗೆ ಹಲ್ಲುಜ್ಜುವಾಗ, ಸೇವಿಂಗ್ ಮಾಡುವಾಗ, ಸ್ನಾನ ಮಾಡುವಾಗ ನೀರು ನಿರಂತರವಾಗಿ ವ್ಯರ್ಥವಾಗದಂತೆ ನೋಡಿಕೊಳ್ಳುವುದು, ಗಿಡಗಳಿಗೆ ಅಗತ್ಯಕ್ಕಿಂತ ಹೆಚ್ಚು ನೀರು ಸುರಿಯದೇ, ಯುಕ್ತಿಯಾಗಿ ಬಳಕೆ ಮಾಡಬಹುದು ಎಂದು ತಿಳಿಸಲಾಯಿತು.
ಈ ಸಂದರ್ಭ ಒಕ್ಕೂಟದ ಅಧ್ಯಕ್ಷರಾದ ಅಪೂರ್ವ ಜೈನ್ ಅವರು ಪರಿಸರ ಸಂರಕ್ಷಣೆಯೊಂದಿಗೆ ನೀರು ಉಳಿಸುವುದು ಇಂದಿನ ದಿನದಲ್ಲಿ ಅತ್ಯಗತ್ಯವಾಗಿದೆ ಎಂದು ಹೇಳಿದರು.
ಪದಾಧಿಕಾರಿಗಳಾದ ನಿತಿನ್, ನವೀನ್, ಸೇವಾಪ್ರತಿನಿಧಿ ಚೈತ್ರ, ನವ್ಯ ಹಾಗೂ ಒಕ್ಕೂಟದ ಪದಾಧಿಕಾರಿಗಳು ಮತ್ತು ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.








