

ನೆಲ್ಯಾಡಿ: ನಿವೃತ್ತ ಸೈನಿಕ, ಹಿರಿಯ ಸಾಹಿತಿ, ಕವಿ ಹಾಗೂ ಕೃಷಿಕರಾದ ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ನಿವಾಸಿ ಅಗ್ರಾಳ ನಾರಾಯಣ ರೈ(85 ವ.) ಅವರು ಅಲ್ಪಕಾಲದ ಅನಾರೋಗ್ಯದಿಂದ ಇಂದು (ಏ.20) ಬೆಳಿಗ್ಗೆ 9.30ಕ್ಕೆ ಮಂಗಳೂರು ಖಾಸಗಿ ಆಸ್ಪತ್ರೆಗೆ ಮೃತಪಟ್ಟಿದ್ದಾರೆ.
ಮೂರು ದಿನಗಳ ಹಿಂದೆ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನ ಹೊಂದಿದ್ದಾರೆ.
ಸುಮಾರು 28 ವರ್ಷಗಳ ಕಾಲ ಬೆಂಗಳೂರಿನಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ನಾರಾಯಣ ರೈ, ನಿವೃತ್ತಿಯ ಬಳಿಕ ಕೃಷಿಯಲ್ಲಿ ತೊಡಗಿದ್ದರು. ಸಾಹಿತ್ಯಾಸಕ್ತರಾಗಿ ಕಥೆ, ಕವನಗಳ ರಚನೆ ಮಾಡುತ್ತಿದ್ದ ಇವರು ಹಲವು ಪ್ರಾಸಂಗಿಕ ಬರಹಗಳನ್ನು ವಿವಿಧ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಕೆಲ ಸಾಹಿತ್ಯಕೃತಿಗಳು ಪುಸ್ತಕ ರೂಪದಲ್ಲೂ ಪ್ರಕಟವಾಗಿವೆ.
ಇವರ ಸಾಹಿತ್ಯ ಸೇವೆಯನ್ನು ಗುರುತಿಸಿದ ಕನ್ನಡ ಸಾಹಿತ್ಯ ಪರಿಷತ್, ಬಂಟರ ಸಂಘ ಮತ್ತು ಇತರ ಸಂಸ್ಥೆಗಳಿಂದ ಗೌರವಿಸಲ್ಪಟ್ಟಿದ್ದಾರೆ. ನಾರಾಯಣ ರೈ ಅವರು ನೆಲ್ಯಾಡಿ ವಲಯ ಬಂಟರ ಸಂಘದ ಸ್ಥಾಪಕಾಧ್ಯಕ್ಷರಾಗಿದ್ದು, ನಂತರ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಸಮಿತಿಯಲ್ಲೂ ಸೇವೆ ಸಲ್ಲಿಸಿದ್ದರು. ಕೊಡುಗೈದಾನಿಯಾಗಿ, ಸಾಮಾಜಿಕ ಧಾರ್ಮಿಕ ಕ್ಷೇತ್ರದಲ್ಲೂ ಸಕ್ರಿಯವಾಗಿ ಪಾತ್ರವಹಿಸಿದ್ದರು.
ಮೃತರು ಪತ್ನಿ ಸುಲೋಚನಾ ರೈ, ಪುತ್ರ ಪ್ರಸನ್ನ ರೈ, ಪುತ್ರಿಯರಾದ ಪೂರ್ಣಿಮಾ ರೈ ಮತ್ತು ಪ್ರತಿಮಾ ರೈ ಹಾಗೂ ಸೊಸೆ, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.
ಇವರ ನಿಧನದಿಂದ ನೆಲ್ಯಾಡಿ ಪ್ರದೇಶದ ಸಾಹಿತ್ಯ, ಸಮಾಜ ಮತ್ತು ಧಾರ್ಮಿಕ ಕ್ಷೇತ್ರಕ್ಕೆ ನಷ್ಟವಾಗಿದೆ.










