


ನೆಲ್ಯಾಡಿ: ನೆಲ್ಯಾಡಿ ವಿಶ್ವವಿದ್ಯಾನಿಲಯ ಕಾಲೇಜಿನ ವಾಣಿಜ್ಯ ಸಂಘದ ವತಿಯಿಂದ “ಮ್ಯೂಚುವಲ್ ಫಂಡ್” ಹೂಡಿಕೆಯ ಕುರಿತಾಗಿ ಒಂದು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಯುಟಿಐ ಮ್ಯೂಚುವಲ್ ಫಂಡ್‌ನ ದಕ್ಷಿಣ ಕನ್ನಡ ಜಿಲ್ಲಾ ವ್ಯವಹಾರ ಸಂಘಟಕರೂ ಹಾಗೂ ಫೈನಾನ್ಸ್ ತಜ್ಞರಾಗಿ ಖ್ಯಾತರಾದ ಆದಿತ್ಯ ಎಸ್. ರಾವ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.

ಅವರು ಮ್ಯೂಚುವಲ್ ಫಂಡ್‌ನ ಅವಶ್ಯಕತೆ, ಹೂಡಿಕೆಯ ವೈವಿಧ್ಯತೆ, ಲಾಭ-ನಷ್ಟದ ಅಂಶಗಳು, ಷೇರು ಮಾರುಕಟ್ಟೆ ಹಾಗೂ ಮ್ಯೂಚುವಲ್ ಫಂಡ್‌ಗಳ ಕಾರ್ಯಪದ್ಧತಿಯ ಬಗ್ಗೆ ವಿದ್ಯಾರ್ಥಿಗಳಿಗೆ ಸವಿಸ್ತಾರವಾಗಿ ವಿವರಣೆ ನೀಡಿದರು. ಅವರು ಪ್ರಸ್ತುತ ಹೂಡಿಕೆಯನ್ನು ಭವಿಷ್ಯದ ಪೀಳಿಗೆಯ ಜೀವನಮಟ್ಟ ಸುಧಾರಿಸಲು ಸಹಾಯಕವಾಗುವಂತೆ ರೂಪಿಸಬೇಕೆಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಸೀತಾರಾಮ್ ಪಿ ವಹಿಸಿದ್ದರು. ಅವರು ಮಾರುಕಟ್ಟೆ ಅಪಾಯವಿಲ್ಲದ ಹೂಡಿಕೆ ಆಯ್ಕೆ ಮಾಡುವ ಪ್ರಾಮುಖ್ಯತೆ ಹಾಗೂ ಆರ್ಥಿಕ ಸಾಕ್ಷರತೆಯ ಅಗತ್ಯತೆ ಬಗ್ಗೆ ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು.
ಕಾರ್ಯಕ್ರಮ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾಗಿದ್ದು, ವಾಣಿಜ್ಯ ಸಂಘದ ಸಂಚಾಲಕಿ ಪಾವನಾ ಸ್ವಾಗತಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ತೃತೀಯ ಬಿಕಾಂ ವಿದ್ಯಾರ್ಥಿನಿ ಯಕ್ಷಿತ ಅವರು ನಿರ್ವಹಿಸಿದ್ದು, ನುಸ್ರೀಲ್ ವಂದಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ವೆರೋನಿಕಾ ಪ್ರಭಾ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.











