ಸಂತ ಜೋರ್ಜರ ಹಬ್ಬದಲ್ಲಿ ಇಚ್ಛಾರ್ಥ ಪೂರ್ಣಗೊಂಡ ಭಕ್ತರಿಂದ ವಿಶಿಷ್ಟ ಹರಕೆ ಸೇವೆ; ಸಂಪ್ರದಾಯ, ನಂಬಿಕೆ ಹಾಗೂ ಭಾವನೆಯ ಮಹಾಪೂರ



ನೆಲ್ಯಾಡಿ: ಧರ್ಮ ಭಾವನೆಯಾಚೆಗೆ ಮನುಷ್ಯನ ನಂಬಿಕೆಯೊಂದು ಜಯಿಸುತ್ತಿರುವ ಅಪೂರ್ವ ದೃಶ್ಯ ಇಚ್ಲಂಪಾಡಿಯಲ್ಲಿ ಪ್ರತಿ ವರ್ಷ ಮೇ 1ರಿಂದ 7ರ ತನಕ ನಡೆಯುವ ಸಂತ ಜೋರ್ಜರ ಹಬ್ಬದ ವೇಳೆ ಕಾಣಸಿಗುತ್ತಿದೆ. ಇಲ್ಲಿ ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಧರ್ಮದ ಭಕ್ತರು ತಮ್ಮ ಇಷ್ಟಾರ್ಥ ಪೂರ್ತಿಯಾದ ನಿಮಿತ್ತ,ಉರುಳು ಸೇವೆಯನ್ನು ಅರ್ಪಿಸುತ್ತಿರುವುದು ವಿಶಿಷ್ಟ ಹಾಗೂ ಭಾವನಾತ್ಮಕ ಸಂಗತಿ.
ಈ ಚರ್ಚ್ ಹಬ್ಬದ ಪ್ರಮುಖ ಆಕರ್ಷಣೆಯಾದ ಉರುಳು ಸೇವೆ ಸ್ವ ಇಚ್ಛೆಯಿಂದ ನೆರವೇರಿಸುವ ಅತಿದೊಡ್ಡ ಹರಕೆ ಸೇವೆ ಆಗಿದೆ. ಸುಮಾರು 16 ವರ್ಷಗಳ ಹಿಂದೆಯವರೆಗೂ ಚರ್ಚ್ ಸುತ್ತಲೂ ಸೇವೆ ನಡೆಯುತ್ತಿದ್ದು, ಭಕ್ತರ ಸಂಖ್ಯೆಯು ಗಣನೀಯವಾಗಿ ಹೆಚ್ಚಿದ ಹಿನ್ನಲೆಯಲ್ಲಿ ಇದೀಗ ಚರ್ಚ್ ಎದುರು ನಿಗದಿತ ಸ್ಥಳದಲ್ಲಿ ಈ ಸೇವೆ ನಡೆಸಲಾಗುತ್ತಿದೆ. ಪ್ರತಿ ವರ್ಷ ಸುಮಾರು 5ಸಾವಿರಕ್ಕೂ ಅಧಿಕ ಭಕ್ತರು ಧರ್ಮ, ಜಾತಿ ಮೀರಿದ ಭಾವನೆಗಳಿಂದ ಈ ಸೇವೆಯಲ್ಲಿ
ಭಾಗವಹಿಸುತ್ತಾರೆ.
ಸ್ವದೇಶದಿಂದ ಊರಿಗೆ ಬರಲು ತೊಂದರೆಯಾಗಿದ್ದಾಗ ಸಂತ ಜೋರ್ಜರಿಗೆ ಪ್ರಾರ್ಥಿಸಿ ಉರುಳು ಸೇವೆ ಕೊಡುತ್ತೇನೆ ಎಂದು ಹರಕೆ ಹಿಡಿದಿದ್ದೆ. 15 ದಿನಗಳಲ್ಲಿ ಊರಿಗೆ ಬರಲು ಸಾಧ್ಯವಾಯಿತು. ಈಗ 10 ವರ್ಷಗಳಿಂದ ನಿರಂತರ ಸೇವೆ ನೀಡುತ್ತಿದ್ದೇನೆ.
-ರೋಹಿ ಟಿ.ಎಂ., ಕಲ್ಲರ್ಬ ಗ್ರಾ.ಪಂ.ಸದಸ್ಯರು

ಕಳೆದ 8 ವರ್ಷಗಳಿಂದ ಉರುಳು ಸೇವೆಯನ್ನು ಮಾಡುತ್ತಿದ್ದು ಎಲ್ಲ ಇಷ್ಟಾರ್ಥಗಳು ನೆರವೇರಿದೆ ಹಾಗೂ ಈ ಪ್ರದೇಶಕ್ಕೆ ಬಂದಾಗ ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ.
-ಅಭಿಲಾಷ್, ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಕಡಬ

ಕಳೆದ 3ವರ್ಷದಿಂದ ಸೇವೆಯನ್ನು ನೀಡುತ್ತಿದ್ದು ಎಲ್ಲ ಇಷ್ಟಾರ್ಥಗಳು ನೆರವೇರಿದೆ. ಮುಂದೆಯೂ ಸೇವೆ ನೀಡುತ್ತೇನೆ.
-ಸತೀಶ್ ಎಂ.ಮೀನಾಡಿ













